ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತೆ ಕುಸಿತ: ಕೋವಿಡ್ ಮೂರನೇ ಅಲೆ ಪರಿಣಾಮ

Published on

ಮಂಗಳೂರು: ಡಿಸೆಂಬರ್ ಅಂತ್ಯಕ್ಕೆ ಆರಂಭಗೊಂಡ ಕೋವಿಡ್ ಮೂರನೇ ಅಲೆ, ವಿಮಾನ ಪ್ರಯಾಣಿಕರ ಮೇಲೆಯೂ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ನಡೆಸಿದವರ ಅಂಕಿಅಂಶ ಇದನ್ನು ದೃಢಪಡಿಸುತ್ತದೆ.

ಕಳೆದ ಡಿಸೆಂಬರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣ ಮೂಲಕ ಒಟ್ಟು 1,38,369 ಮಂದಿ (ದೇಶೀಯ 1,07,090 ಮತ್ತು ಅಂತಾರಾಷ್ಟ್ರೀಯ 31,279) ಪ್ರಯಾಣಿಸಿದ್ದರು. ಆದರೆ ತೃತೀಯ ಅಲೆ ತೀವ್ರವಾಗಿ ಗೋಚರಿಸಿದ ಜನವರಿ ತಿಂಗಳಲ್ಲಿ ಒಟ್ಟು 92,012 ಮಂದಿಯಷ್ಟೇ (ದೇಶೀಯ 63,648. ಅಂತಾರಾಷ್ಟ್ರೀಯ 28,364) ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಪ್ರಯಾಣಿಸಿದ ವಿಮಾನಗಳ ಸಂಖ್ಯೆಯಲ್ಲಿಯೂ ವ್ಯತ್ಯಾಸವನ್ನು ಗಮನಿಸಬಹುದು. ಡಿಸೆಂಬರ್‌ನಲ್ಲಿ ದೇಶೀಯ 953, 219 ಅಂತಾರಾಷ್ಟ್ರೀಯ ಮತ್ತು 60 ಚಾರ್ಟರ್ಡ್ ಒಟ್ಟು 1,232 ವಿಮಾನಗಳು ಮಂಗಳೂರು ವಿಮಾನ ನಿಲ್ದಾಣ ಮೂಲಕ ಸಂಚರಿಸಿವೆ. ಜನವರಿಯಲ್ಲಿ 712 ದೇಶೀಯ, 248 ಅಂತಾರಾಷ್ಟ್ರೀಯ ಮತ್ತು 44 ಚಾರ್ಟರ್ಡ್ ಒಟ್ಟು 1,004 ವಿಮಾನಗಳು ಸಂಚರಿಸಿವೆ. ಕಳೆದ ಅಕ್ಟೋಬರ್‌ನಲ್ಲಿ ದೇಶೀಯ 80,704 ಮತ್ತು ಅಂತಾರಾಷ್ಟ್ರೀಯ 39,134, ಒಟ್ಟು 1,07,190 ಮಂದಿ ಪ್ರಯಾಣಿಸಿದ್ದರು. ಈ ಅವಧಿಯಲ್ಲಿ ದೇಶೀಯ 781, ಅಂತಾರಾಷ್ಟ್ರೀಯ 201 ಮತ್ತು ಚಾರ್ಟರ್ಡ್ 14 ಒಟ್ಟು 996 ವಿಮಾನಗಳು ಸಂಚರಿಸಿದ್ದವು.

ಏರ್‌ಪೋರ್ಟ್ ಹೆಸರು ಪ್ರಸ್ತಾವ ಇಲ್ಲ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಈವರೆಗೆ ಬಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಲ್ಲಿ ಸೋಮವಾರ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಡಾ.ವಿ.ಕೆ.ಸಿಂಗ್ ಉತ್ತರಿಸಿದ್ದು, ವಿಮಾನ ನಿಲ್ದಾಣಗಳಿಗೆ ಹೆಸರಿಡುವಾಗ ಆಯಾ ರಾಜ್ಯ ಸರ್ಕಾರಗಳ ಶಿಫಾರಸು ಮತ್ತು ರಾಜ್ಯ ವಿಧಾನಸಭೆಯ ನಿರ್ಣಯವನ್ನು ಪರಿಗಣಿಸಲಾಗುತ್ತದೆ. ಆದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಪ್ರಸ್ತಾವ ಹಾಗೂ ಶಿಫಾರಸು ಬಂದಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಕರಣ ಇಳಿಕೆ: ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈನಂದಿನ ಕರೊನಾ ಸೋಂಕು ಸೋಮವಾರ ಎರಡಂಕೆಗೆ ಇಳಿದಿದೆ. 90 ಮಂದಿಯಲ್ಲಿ (ಶೇ.1.76) ಕರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಂಗಳೂರಿನ ಇಬ್ಬರು ಮತ್ತು ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ತಲಾ ಓರ್ವರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ 85 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣ 1764ಕ್ಕೆ ಇಳಿದಿದ್ದು, ಪಾಸಿಟಿವಿಟಿ ದರ ಶೇ. 7.73ರಷ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net