

ಬೆಳಗಾವಿ: ತಾಲೂಕಿನ ಸಾಂಬ್ರಾದಲ್ಲಿರುವ ಭಾರತೀಯ ವಾಯು ದಳದ, ಏರ್ಮನ್ ತರಬೇತಿ ಶಾಲೆಯ ಅಧಿಕಾರಿಗಳು ಹಾಗೂ ಪ್ರಶಿಕ್ಷಣಾರ್ಥಿಗಳ ತಂಡವು ಬುಧವಾರ ಇಲ್ಲಿ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ, ಶೈಕ್ಷಣಿಕ ಅಧ್ಯಯನ ನಡೆಸಿತು.
ಅಧಿಕಾರಿಗಳಾದ ಜೆಡಬ್ಲ್ಯುಒ ರಾಕೇಶ್ ಗಜರಾಜ, ಎಸ್.ಅಭಿಷೇಕ್ ಬಚ್ಚನ್ ಮತ್ತು ಸಾರ್ಜೆಂಟ್ ಆಶಿಷ್ ಥಪಲಿಯಾಲ ಸೇರಿದಂತೆ 29 ಭಾರತೀಯ ಮತ್ತು ನಾಲ್ವರು ಶ್ರೀಲಂಕಾದ ಪ್ರಶಿಕ್ಷಣಾರ್ಥಿಗಳು ತಂಡದಲ್ಲಿದ್ದರು.
ತರಬೇತಿಯ ಭಾಗವಾಗಿ ಗ್ರಂಥಾಲಯ ನಿರ್ವಹಣೆ, ಸೇವೆಗಳು ಮತ್ತು ಕಾರ್ಯ ನಿರ್ವಹನೆ, ಸಾರ್ವಜನಿಕ ಗ್ರಂಥಾಲಯದ ಪೂರ್ಣ ವ್ಯವಸ್ಥೆ ಬಗ್ಗೆ ಈ ತಂಡ ಅಧ್ಯಯನ ನಡೆಸಿತು.
ಗ್ರಂಥಾಲಯ ಉಪನಿರ್ದೇಶಕ ರಾಮಯ್ಯ ಮಾತನಾಡಿ, ಗ್ರಂಥಾಲಯ ಕಾಯ್ದೆ, ಬಜೆಟ್, ಆಡಳಿತಾತ್ಮಕ ವಿಷಯಗಳು, ಪುಸ್ತಕ ಖರೀದಿ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಸಿಬ್ಬಂದಿ ಪ್ರಕಾಶ ಇಚಲಕರಂಜಿ, ಆಂಬೇಕರ್ ಅವರು ಗ್ರಂಥಾಲಯದ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಪುಸ್ತಕ ಸಂಗ್ರಹ, ತಾಂತ್ರಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು