ಏರಸೆಲ್, ಜಿಟಿಎಲ್ ಕಂಪನಿಗೆ ದಂಡ

law-4617873_1920
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಟವರ್ ಸ್ಥಾಪನೆಗೆ ಜಾಗ ಪಡೆದು ಬಾಡಿಗೆ ನೀಡದ ಏರಸೆಲ್, ಜಿಟಿಎಲ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಅಕ್ಷಯ ಕಾಲನಿಯ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ಅವರು ಧಾರವಾಡದಲ್ಲಿನ ತಮ್ಮ ಜಾಗದಲ್ಲಿ ಪ್ರತಿ ತಿಂಗಳ ಬಾಡಿಗೆ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟವರ್ ಸ್ಥಾಪನೆಗೆ ನೀಡಿದ್ದರು. 2019ರ ಜೂನ್‌ನಿಂದ 2024ರ ಜೂನ್‌ವರೆಗೆ ಕರಾರು ಅವಧಿ ಇತ್ತು. 2017ರ ನವೆಂಬರ್‌ವರೆಗೆ ಬಾಡಿಗೆ ನೀಡಿದ್ದ ಕಂಪನಿ, ನಂತರದ ಅವಧಿಯಲ್ಲಿ ಬಾಡಿಗೆ ನೀಡುವುದನ್ನು ನಿಲ್ಲಿಸಿತ್ತು. ಈ ಮಧ್ಯದಲ್ಲಿ ಏರಸೆಲ್ ಕಂಪನಿ ಜಿಟಿಎಲ್ ಕಂಪನಿಯಲ್ಲಿ ಸೇರಿಕೊಂಡಿದೆ ಎಂದು ಹೇಳಿದ್ದರು. ಹಲವು ಬಾರಿ ಬಾಡಿಗೆ ಕೊಡುವಂತೆ ಕೇಳಿದರೂ ಕೊಟ್ಟಿರಲಿಲ್ಲ. ಹೀಗಾಗಿ ತಮಗೆ ಮೋಸವಾಗಿದೆ ಎಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಏಪ್ರಿಲ್‌ನಲ್ಲಿ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಕರಾರಿನ ಪ್ರಕಾರ ಪ್ರತಿ ತಿಂಗಳು ಬಾಡಿಗೆ ನೀಡಬೇಕು. ಆದರೆ ಸುಮಾರು 6 ವರ್ಷದ ಬಾಡಿಗೆ 7,92,798 ರೂ. ಕೊಡದೆ ಮೋಸ ಮಾಡಿರುವುದು ಸೇವಾ ನ್ಯೂನ್ಯತೆ ಎಸಗಿದಂತಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳೊಳಗೆ ಬಾಕಿ ಇರುವ 7,92,798 ರೂ. ಬಾಡಿಗೆ, ತೀರ್ಪು ನೀಡಿದ ದಿನಾಂಕದಿಂದ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ಬಾಡಿಗೆ ಕರಾರಿನ ಷರತ್ತನ್ನು ಏರಸೆಲ್ ಕಂಪನಿ ಉಲ್ಲಂಘಿಸಿದ್ದರಿಂದ ಟವರ್ ಹಾಕಿದ ಸಲಕರಣೆಗಳನ್ನು ಕಿತ್ತುಕೊಂಡು ಖುಲ್ಲಾ ಜಾಗೆಯ ಸ್ವಾಧೀನತೆಯನ್ನು ಮಾಲೀಕರಿಗೆ ನೀಡುವಂತೆ ಹಾಗೂ ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನನುಕೂಲಕ್ಕೆ 50,000 ರೂ. ಪರಿಹಾರ ಮತ್ತು 2,000 ರೂ. ಪ್ರಕರಣದ ಖರ್ಚು ನೀಡುವಂತೆ ಆಯೋಗ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net