2025ಕ್ಕೆ ಗಗನಯಾನ, 2026ಕ್ಕೆ ಸಮುದ್ರಯಾನ

Isro new
Published on

ಹುಬ್ಬಳ್ಳಿ : ಬಾಹ್ಯಾಕಾಶದ ವಿಶೇಷ ಅಧ್ಯಯನಕ್ಕಾಗಿ 2025 ಮುಗಿಯವುದರೊಳಗಾಗಿ ಮಾನವ ಸಹಿತ ಗಗನಯಾನ ನಡೆಯಲಿದ್ದು, ಇದೇ ರೀತಿ ಸಾಗರದ ರಹಸ್ಯಗಳನ್ನು ಬೇಧಿಸುವಲ್ಲಿ ಪೂರಕ ಅಧ್ಯಯನಕ್ಕಾಗಿ 2026ರಲ್ಲಿ ಸಮುದ್ರಯಾನ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹ ನಿರ್ದೇಶಕ, ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ ಹೇಳಿದರು.

ನಗರದ ಶಾಂತವೀರ ಲೇ ಔಟ್ ಬಡಾಣೆಯಲ್ಲಿ ಶಿಕ್ಷಕರಾದ ಸಂಜೀವಕುಮಾರ ಭೂಶೆಟ್ಟಿ ಮತ್ತು ರಾಜು ಭೂಶೆಟ್ಟಿ ಅವರು ಬಾಹ್ಯಾಕಾಶದ ವಿಸ್ಮಯಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಸುಮಾರು 450 ಕಿ.ಮೀ. ಎತ್ತರಕ್ಕೆ 3 ಜನ ಭಾರತೀಯ ಗಗನಯಾತ್ರಿಗಳು ಹೋಗಿ 2-3 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು, ವಿಸõತ ಸಂಶೋಧನೆಗಳೊಂದಿಗೆ ವಾಪಸ್ಸಾಗಲಿದ್ದಾರೆ. ಇದೇ ರೀತಿ ಸಮುದ್ರದ ಆಳದ ಅಧ್ಯಯನಕ್ಕಾಗಿ ಚೆನೈನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಓಸಿಯನ್ ಟೆಕ್ನಾಲಜಿ ಯೋಜನೆ ರೂಪಿಸಿದ್ದು, ತನ್ಮೂಲಕ ಸಾಗರದ ರಹಸ್ಯಗಳನ್ನು ಸಾಗರದ ಆಳಕ್ಕೆ ಇಳಿದು ಬೇಧಿಸಲಾಗುತ್ತಿದೆ. ಅಲ್ಲಿಯೂ ಬೆಳಕಿಗೆ ಬರುವ ವ್ಯಾಪಕ ಹೊಸ ಸಂಗತಿಗಳು ಗಮನಸೆಳೆಯಲಿವೆ ಎಂದು ತಿಳಿಸಿದರು.

ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡ ಡಾ.ದಾರುಕೇಶ, ಬರೀ ಕನ್ನಡವಷ್ಟೇ ಅಲ್ಲ, ಇಂಗ್ಲೀಷ್ ಭಾಷೆಯಲ್ಲೂ ಸಾಹಿತ್ಯದ ಲಭ್ಯತೆ ಕಡಿಮೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಾಹ್ಯಾಕಾಶ ತಂತ್ರಜ್ಞಾನವು ಅತ್ಯಂತ ವೇಗದಲ್ಲಿ ಬದಲಾಗುವ ತಂತ್ರಜ್ಞಾನವಾಗಿದೆ. ಈಗಿನ ಮಕ್ಕಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ವಿಷಯವನ್ನು ವೇಗವಾಗಿ ಒದಗಿಸಬೇಕಾಗಿದೆ. ಈ ಉದ್ದೇಶವನ್ನು ಈಡೇರಿಸಬೇಕೆಂದರೆ ಅದು ಸಾಮಾಜಿಕ ಜಾಲತಾಣಗಳ ಮೂಲಕ ಸಾಧ್ಯ. ಪ್ರಶ್ನೋತ್ತರ ಅಥವಾ ಚರ್ಚಾ ವಿಧಾನಗಳ ಮೂಲಕ ಯು-ಟ್ಯೂಬ್​ಗಳಿಂದಲೂ ವೇಗವಾಗಿ ತಲುಪಿಸಬಹುದಾಗಿದ್ದು, ಅದು ಪರಿಣಾಮಕಾರಿಯೂ ಆಗಿದೆ ಎಂದರು.

ಯುವರಾಜ್, ಸಂಜೀವಕುಮಾರ ಭೂಶೆಟ್ಟಿ, ಸಹನಾ, ಮೃತ್ಯುಂಜಯ, ರಾಜು ಭೂಶೆಟ್ಟಿ, ಗೌರಿ, ಬರದೇಲಿ, ಮುತ್ತು ಪಾಟೀಲ, ಈರಣ್ಣ ಇಳಕಲ್ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net