ಮೈಸೂರು ದಸರೆಯಲ್ಲಿ ವೈಮಾನಿಕ ಪ್ರದರ್ಶನ

mysore dasara
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭ ಈ ಬಾರಿ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಿತ್ತಾರ ಮೂಡಿಸುವ ‘ವೈಮಾನಿಕ ಪ್ರದರ್ಶನ’ವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿದೆ.


ಮೈಸೂರು ದಸರಾ ಉತ್ಸವದಲ್ಲಿ ಜನರನ್ನು ಆಕರ್ಷಿಸುವ ಏರ್ ಶೋ ಆಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 4 ವರ್ಷಗಳ ಬಳಿಕ ಈ ಪ್ರದರ್ಶನ ನಡೆಯುತ್ತಿದೆ. ಭಾರತೀಯ ವಾಯುದಳದ ವತಿಯಿಂದ ನಗರದ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಮೈನವಿರೇಳಿಸುವ ಕಸರತ್ತು ಕಣ್ಮನ ಸೆಳೆಯಲಿದೆ.


2009ರ ದಸರಾದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಳಿಕ 8 ವರ್ಷ ನಡೆಯಲಿಲ್ಲ. 2017ರಲ್ಲಿ ಅಂದಿನ ಜಿಲ್ಲಾಧಿಕಾರಿ ರಂದೀಪ್ ಅವರ ಪ್ರಯತ್ನದ ಫಲವಾಗಿ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ, 2018ರಲ್ಲಿ ನಡೆಸಲು ಆಗಲಿಲ್ಲ. 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸತತ ಪ್ರಯತ್ನದ ಫಲವಾಗಿ ವೈಮಾನಿಕ ಪ್ರದರ್ಶನ ಜರುಗಿತ್ತು. ಕರೊನಾ ಕಾರಣಕ್ಕೆ 2020 ಮತ್ತು 2021ರಲ್ಲಿ ಸರಳವಾಗಿ ನಡೆದ ದಸರಾದಲ್ಲಿ ಏರ್ ಶೋ ಆಯೋಜನೆಗೆ ಯಾರೂ ಗಮನ ನೀಡಲಿಲ್ಲ. 2022ರಲ್ಲೂ ಹಮ್ಮಿಕೊಂಡಿರಲಿಲ್ಲ. ಈ ಬಾರಿ ಏರ್ ಶೋ ನೋಡುವ ಅವಕಾಶ ನಾಡಿನ ಜನತೆಗೆ ದೊರೆಯುತ್ತಿದೆ.


ಡಿಸಿ ಪರಿಶೀಲನೆ:

ದಸರಾದಲ್ಲಿ ಏರ್ ಶೋ ಆಯೋಜನೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಕೋರಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಬನ್ನಿಮಂಟಪದ ಮೈದಾನಕ್ಕೆ ಶುಕ್ರವಾರ ಭೇಟಿ ನೀಡಿ ಸ್ಧಳ ಹಾಗೂ ಏರ್ ಶೋ ನಡೆಸಲು ಬೇಕಾದ ರೂಪುರೇಷೆ ಪರಿಶೀಲನೆ ನಡೆಸಿದರು.


ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಹೋಜಾ ಅವರೊಂದಿಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಏರ್ ಶೋ ನಡೆಸುವ ಸ್ಧಳ, ದಿನಾಂಕ ಹಾಗೂ ಸಮಯ ಕುರಿತು ಚರ್ಚಿಸಿದರು.


ವಿವಿಧ ಸಾಹಸ ಪ್ರದರ್ಶನ:

ಕೇವಲ ಒಂದು ತಾಸು ಏರ್ ಶೋ ನಡೆಯುವ ನಿರೀಕ್ಷೆ ಇದೆ. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ, 6 ಸಾವಿರ ಅಡಿ ಎತ್ತರದಿಂದ ತ್ರಿವರ್ಣ ಧ್ವಜ ಸಹಿತ ಯೋಧರಿಂದ ಸ್ಕೈಡೈವಿಂಗ್, ಹಗ್ಗದ ಮೂಲಕ ಮೈದಾನಕ್ಕೆ ಇಳಿದು ಕಲ್ಪಿತ ಯುದ್ಧ ಪ್ರದರ್ಶನ, ಪ್ಯಾರಾಚೂಟ್ ಧರಿಸಿ ಜಿಗಿದು ಮೈ ಜುಮ್ಮೆನಿಸುವ ಕಸರತ್ತು ಸೇರಿದಂತೆ ವಿವಿಧ ಸಾಹಸ ಪ್ರದರ್ಶನ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net