ರೈಲು ನಿಲ್ದಾಣದಲ್ಲಿ ಏರ್​ಪೋರ್ಟ್ ಮಾದರಿ ಭದ್ರತೆ

h2-Railway 5
Published on

ಹುಬ್ಬಳ್ಳಿ: ನೈಋತ್ಯ ವಲಯ ವತಿಯಿಂದ ಓಡಿಸಲಾಗುವ ರೈಲುಗಳಲ್ಲಿ ಮಾದಕ ಹಾಗೂ ಸ್ಪೋಟಕ ವಸ್ತು, ಅಕ್ರಮ ಚಿನ್ನಾಭರಣ, ಮದ್ಯ ಮುಂತಾದ ಅಕ್ರಮ ವಸ್ತುಗಳ ಸಾಗಾಟಕ್ಕೆ ಬ್ರೇಕ್ ಬೀಳಲಿದೆ.

ರೈಲುಗಳ ಹಾಗೂ ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆಯನ್ನು ರೈಲು ನಿಲ್ದಾಣಗಳಲ್ಲಿಯೂ ಅಳವಡಿಸಲು ನೈಋತ್ಯ ವಲಯ ಮುಂದಾಗಿದೆ.

ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಎಕ್ಸ್​ರೇ ಬ್ಯಾಗೇಜ್ ಸ್ಕ್ಯಾನರ್ ಮಷಿನ್ ಅನ್ನು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಅಳವಡಿಸಿದ ಮೊದಲ ಉಪಕರಣ ಇದಾಗಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಉಪಕರಣ ಹುಬ್ಬಳ್ಳಿ ನಿಲ್ದಾಣದಲ್ಲಿ ಅಳವಡಿಕೆಯಾಗಲಿದೆ.

ನಿಲ್ದಾಣದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ಸರಕುಗಳನ್ನು ಈ ಉಪಕರಣದ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಬ್ಯಾಗ್​ಗಳಲ್ಲಿ ಇಟ್ಟಿರುವ ಪ್ರತಿ ವಸ್ತುವನ್ನು ಉಪಕರಣದ ಲ್ಲಿರುವ ಪರದೆಯಲ್ಲಿ

ಆರ್​ಪಿಎಫ್ ಸಿಬ್ಬಂದಿ ಪರಿಶೀಲಿಸುತ್ತಾರೆ. ಮದ್ಯದ ಬಾಟಲಿ, ಹರಿತ ಆಯುಧಗಳು, ಸ್ಪೋಟಕಗಳು ಹಾಗೂ ಇತರ ಅಕ್ರಮ ವಸ್ತುಗಳು ಕಂಡಲ್ಲಿ ತಕ್ಷಣ ಬ್ಯಾಗ್​ನೊಂದಿಗೆ ಅವುಗಳನ್ನು ಸಾಗಿಸುವ ವ್ಯಕ್ತಿಯನ್ನೂ ವಶಕ್ಕೆ ಪಡೆಯುತ್ತಾರೆ. ಈಗಾಗಲೇ ಬೆಂಗಳೂರು, ಯಶವಂತಪುರ ಹಾಗೂ ಮೈಸೂರು ನಿಲ್ದಾಣಗಳಲ್ಲಿ ಈ ಉಪಕರಣದ ಮೂಲಕ ಭದ್ರತಾ ವ್ಯವಸ್ಥೆಯನ್ನು ರೈಲ್ವೆ ಭದ್ರತಾ ದಳ ಬಲಪಡಿಸಿದೆ.

ಹುಬ್ಬಳ್ಳಿ ವಿಭಾಗದ ಬೆಳಗಾವಿ, ವಿಜಯಪುರ, ವಾಸ್ಕೊ ಡ ಗಾಮಾ ನಿಲ್ದಾಣಗಳಲ್ಲಿಯೂ ಎಕ್ಸ್​ರೇ ಬ್ಯಾಗೇಜ್ ಸ್ಕಾ್ಯನರ್ ಮಷಿನ್ ಅನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ಉದ್ದೇಶ ಆರ್​ಪಿಎಫ್ ಅಧಿಕಾರಿಗಳದ್ದು. ಹಂತ ಹಂತವಾಗಿ ಇತರ ಪ್ರಮುಖ ನಿಲ್ದಾಣಗಳಲ್ಲಿಯೂ ಈ ಉಪಕರಣ ಅಳವಡಿಕೆಯಾಗಲಿದೆ.

ರೈಲು, ರೈಲು ನಿಲ್ದಾಣ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಹುಬ್ಬಳ್ಳಿ ಪ್ರಮುಖ ನಿಲ್ದಾಣವಾಗಿರುವುದರಿಂದ ಇಲ್ಲಿ ಎಕ್ಸ್​ರೇ ಬ್ಯಾಗೇಜ್ ಸ್ಕ್ಯಾನರ್ ಮಷಿನ್ ಅನ್ನು ಅಳವಡಿಸಲಾಗಿದ್ದು, ಹಂತ ಹಂತವಾಗಿ ಇತರ ನಿಲ್ದಾಣಗಳಲ್ಲಿಯೂ ಅಳವಡಿಸಲಾಗುವುದು. | ವಲ್ಲೇಶ್ವರ ಸೀನಿಯರ್ ಡಿವಿಜಿನಲ್ ಸೆಕ್ಯುರಿಟಿ ಕಮೀಷನರ್, ಆರ್​ಪಿಎಫ್, ಹುಬ್ಬಳ್ಳಿ

ಮೊದಲ ದಿನವೇ ಸಿಕ್ಕಿತು ಮದ್ಯದ ಬಾಟಲಿ!

ಸ್ಕ್ಯಾನರ್ ಅಳವಡಿಸಿದ ಮೊದಲ ದಿನದಂದೇ ಮದ್ಯದ ಬಾಟಲಿಯೊಂದು ಪತ್ತೆಯಾಗಿದೆ. ಬ್ಯಾಗನಲ್ಲಿ ಇದ್ದ ಮದ್ಯದ ಬಾಟಲಿಯನ್ನು ಸ್ಕ್ಯಾನರ್ ತೋರಿಸಿದೆ. ರೈಲ್ವೆ ಪೊಲೀಸ್ ಸಿಬ್ಬಂದಿ ಈ ಬಾಟಲಿಯನ್ನು ತೆಗೆದುಕೊಂಡು, ಪ್ರಯಾಣಿಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ರೈಲುಗಳಲ್ಲಿ ಕೆಲ ಕಿಡಿಗೇಡಿಗಳು ಮದ್ಯ ಸೇವಿಸಿ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವ ಘಟನೆಗಳು ಆಗಾಗ ನಡೆಯುತ್ತಿದ್ದವು. ಬ್ಯಾಗ್​ಗಳನ್ನು ತೆಗೆದು ಪರಿಶೀಲಿಸುವ ಕಾರ್ಯ ಈ ಮುಂಚೆ ನಡೆಯುತ್ತಿರಲಿಲ್ಲ. ಹಾಗಾಗಿ, ಇಂಥ ಘಟನೆಗಳಿಗೆ ಕಡಿವಾಣ ಬಿದ್ದಿರಲಿಲ್ಲ. ಇನ್ನು ಮುಂದೆ ಪ್ರತಿಯೊಂದು ಬ್ಯಾಗ್​ನ ಪರಿಶೀಲನೆ ನಡೆಯುವುದರಿಂದ ಪ್ರಯಾಣಿಕರು ನೆಮ್ಮದಿಯಾಗಿ ಪ್ರಯಾಣಿಸಬಹುದಾಗಿದೆ.

ತಪ್ಪಿಸಬಹುದಿತ್ತು 2019ರ ಸ್ಫೋಟ

2019ರ ಅಕ್ಟೋಬರ್​ನಲ್ಲಿ ಹುಬ್ಬಳ್ಳಿಯ ಪ್ಲಾಟ್​ಫಾಮ್ರ್ 1ರಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ- ವಿಜಯವಾಡ ಎಕ್ಸ್​ಪ್ರೆಸ್ ರೈಲಿನಲ್ಲಿ ಸ್ಪೋಟಕ ತುಂಬಿದ್ದ

ಬಾಕ್ಸ್​ಗಳಿದ್ದವು. ಈ ಬಾಕ್ಸ್​ಗಳ ಪೈಕಿ ಒಂದನ್ನು ತೆಗೆಯುತ್ತಿದ್ದಂತೆ ಸ್ಪೋಟಗೊಂಡಿತ್ತು. ಸ್ಪೋಟದಿಂದಾಗಿ ರೈಲ್ವೆ ಸ್ಟೇಶನ್ ಮಾಸ್ಟರ್ ಕಚೇರಿಯ ಕಿಟಕಿ ಗಾಜುಗಳು ಪುಡಿಯಾಗಿ, ಒಬ್ಬ ಗಂಭೀರ ಗಾಯಗೊಂಡಿದ್ದ. ಈಗ ಅಳವಡಿಸಲಾದ ಎಕ್ಸ್​ರೇ ಬ್ಯಾಗೇಜ್ ಸ್ಕಾ್ಯನರ್ ಮಷಿನ್, ಆಗ ಇದ್ದಿದ್ದರೆ ಖಂಡಿತವಾಗಿಯೂ ಅನಾಹುತ ತಪ್ಪಿಸಬಹುದಿತ್ತು. ಏಕೆಂದರೆ, ಬಾಕ್ಸ್​ಗಳನ್ನು ಮಷಿನ್​ನಲ್ಲಿ ಪರಿಶೀಲಿಸಿದರೆ, ಸ್ಪೋಟಕ ಇರುವುದು ತಿಳಿದುಬರುತ್ತಿತ್ತು.

ಇನ್ನಷ್ಟು ಸಿಸಿ ಕ್ಯಾಮರಾ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗಾಗಲೇ 55 ಸಿಸಿ ಕ್ಯಾಮರಾಗಳಿದ್ದು, ಇನ್ನಷ್ಟು ಕ್ಯಾಮರಾಗಳನ್ನು ಅಳವಡಿಸುವಂತೆ ಹುಬ್ಬಳ್ಳಿ ವಿಭಾಗದ ಆರ್​ಪಿಎಫ್ ಅಧಿಕಾರಿಗಳು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net