

ಜಗಳೂರು: ಶ್ವಾಸಕೋಶದ ಕ್ಯಾನ್ಸರ್, ತೀವ್ರ ಉಸಿರಾಟದ ಸೋಂಕುಗಳು ಮತ್ತು ಹೃದ್ರೋಗದಂತಹ ರೋಗಗಳ ಮೂಲಕ ವಾಯು ಮಾಲಿನ್ಯ ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಅಕಾಲಿಕ ಮರಣಗಳಿಗೆ ಕಾರಣವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಬಯಲು ರಂಗಮಂದಿರ ಆವರಣದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ನೀಲಿ ಆಕಾಶಕ್ಕಾಗಿ ಶುದ್ಧ ಗಾಳಿಯ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಯು ಮಾಲಿನ್ಯ ಮಾನವನ ಆರೋಗ್ಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು ಹವಾಮಾನ, ಆರ್ಥಿಕ ಬೆಳವಣಿಗೆ, ನೈಸರ್ಗಿಕ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಸ್ಯಗಳಿಗೆ ಬೆಳೆಯಲು ಕಷ್ಟವಾಗುತ್ತದೆ. ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ ಎಂದರು.
ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ದೇಶವ್ಯಾಪಿ ಬಹಳಷ್ಟು ನಗರಗಳನ್ನು ಮಾಲಿನ್ಯದ ಬಗ್ಗೆ ಸರ್ವೇ ಮಾಡಲಾಗಿದ್ದು, ಅದರಲ್ಲಿ ದಾವಣಗೆರೆಯೂ ಮಲಿನ ನಗರ ಎಂದು ಗುರುತಿಸಲಾಗಿದೆ. ಅದನ್ನು ಹೋಗಲಾಡಿಸುವ ಸಲುವಾಗಿ ಜಿಲ್ಲಾಡಳಿತ ಸುಮಾರು 10 ಎಕರೆ ಪ್ರದೇಶದಲ್ಲಿ ಸಸಿಗಳನ್ನು ಎಲ್ಲ ಕಡೆಗಳಲ್ಲೂ ನೆಟ್ಟು ಹಸಿರೀಕರಣ ಮಾಡಲು ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ರಮೇಶ್, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರಿದ್ದರು.