

ಉಡುಪಿ: ಮಾಲಿನ್ಯ ನಿಯಂತ್ರಣ ಮಾಡುವುದರೊಂದಿಗೆ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹೇಳಿದರು.
ಶುಕ್ರವಾರ ಮಣಿಪಾಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಾಯುವಿನ ಗುಣಮಟ್ಟ ಉತ್ತಮವಾಗಿದೆ. ಇದಕ್ಕೆ ಮುಖ್ಯ ಕಾರಣ ಪರಿಸರದ್ಲಲಿರುವ ಗಿಡ-ಮರಗಳು. ಇವುಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ ಜೂನ್ ತಿಂಗಳಲ್ಲಿ ಸರ್ಕಾರ ಒಂದು ಕೋಟಿಗೂ ಹೆಚ್ಚು ಗಿಡ-ಮರಗಳನ್ನು ನೆಟ್ಟಿದೆ. ಇದು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಗಿಡ-ಮರಗಳ ಬೆಳೆಸುವಿಕೆಯಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಮಾತನಾಡಿ, ಇತ್ತೀಚೆಗೆ ವಾಯು ಮಾಲಿನ್ಯದಿಂದ ಹವಾಮಾನ ಬದಲಾವಣೆ ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಇದರ ನಿಯಂತ್ರಣಕ್ಕೆ ಜನಸಾಮಾನ್ಯರು ಮುಂದಾಗುವುದರೊಂದಿಗೆ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ. ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದೆಹಲಿಯ ವಾಯು ಮಾಲಿನ್ಯ ಸೂಚ್ಯಾಂಕವು 400 ರ ಗಡಿ ದಾಟಿದ್ದು, ಗಂಭೀರ ಸ್ಥಿತಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೀಗಾಗದಂತೆ ಜಾಗೃತರಾಗುವುದು ಅತಿಅವಶ್ಯಕತೆ ಇದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಘಟಕದ ಮುಖ್ಯಸ್ಥ ಡಾ. ವಿಜಯೇಂದ್ರ, ಕರಾವಳಿ ಬಸ್ಸು ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಭಟ್, ಕೆ.ಎಸ್.ಆರ್.ಟಿ.ಸಿ ಉಡುಪಿ ವಿಭಾಗದ ಘಟಕ ವ್ಯವಸ್ಥಾಪಕ ಶಿವರಾಮ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಾಂತರಾಜು ಸ್ವಾಗತಿಸಿ, ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ನಿರೂಪಿಸಿ, ಸರಸ್ವತಿ ವಂದಿಸಿದರು.