

ಮೈಸೂರು: ಮೈಸೂರಿನಿಂದ ಶೀಘ್ರವೇ ಏರ್‌ಕೇರಳ ಸಂಸ್ಥೆಯಿಂದ ವಿಮಾನಯಾನ ಆರಂಭಗೊಳ್ಳಲಿವೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಏರ್ ಕೇರಳ ಸಂಸ್ಥೆಯ ಅಧಿಕಾರಿಗಳ ತಂಡ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೈಸೂರು ಅಧಿಕಾರಿಗಳ ಜತೆ ನಡೆದ ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಏರ್ ಕೇರಳ ಸಂಸ್ಥೆಯು ಸ್ಟಾರ್ಟ್‌ಅಪ್ ಉದ್ಯಮವಾಗಿದ್ದು, ಮೊದಲಿಗೆ ಮೂರು ಎಟಿಆರ್ ಏರ್‌ಕ್ರಾಫ್ಟ್‌ಗಳನ್ನು ಖರೀದಿ ಮಾಡಿ ಕಾರ್ಯಾಚರಣೆ ಶುರುಮಾಡಲಿದೆ ಎಂದು ಹೇಳಿದರು.
ಮೈಸೂರು ಒಂದು ಪ್ರವಾಸಿ ತಾಣವಾಗಿರುವುದಿಂದ ಇಲ್ಲಿಂದಲೂ ಯಾನ ಆರಂಭಿಸಲು ಉದ್ದೇಶಿಸಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ ವಿಮಾನಯಾನ ಸೇವೆ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಮೊದಲು ಮೈಸೂರಿನಿಂದ ಕೇರಳದ ಕೊಚ್ಚಿನ್‌ಗೆ ಹೊರಡುತ್ತಿದ್ದ ವಿಮಾನಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಇದ್ದ ಹಿನ್ನೆಲೆಯಲ್ಲಿ ಇಲ್ಲಿಂದಲೇ ವಾಯುಯಾನ ಸೇವೆ ಉದ್ದೇಶಿಸಲಾಗಿದೆ ಎಂದರು.
ಮೈಸೂರಿಗೆ ರಾಜ್ಯ ಮತ್ತು ಅಂತಾರಾಜ್ಯಗಳಿಂದ ಇಲ್ಲಿನ ದೇವಾಲಯಗಳು ಹಾಗೂ ಇನ್ನಿತರ ಧಾರ್ಮಿಕ ಕೇಂದ್ರಗಳ ವೀಕ್ಷಣೆಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಅರಮನೆ ಸೇರಿದಂತೆ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ನೋಡಲು ಜನರು ಆಗಮಿಸುತ್ತಾರೆ. ಯೋಗವನ್ನು ಕಲಿಯಲು ವಿದೇಶದಿಂದಲೂ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಅಲ್ಲದೇ ಸುತ್ತಮುತ್ತ ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳಿವೆ. ಇಲ್ಲಿಗೂ ಪ್ರವಾಸಿಗರು ಬರುವುದಕ್ಕೆ ವಿಮಾನಯಾನ ಸೇವೆ ಸಹಕಾರಿಯಾಗುತ್ತದೆ. ಕೈಗಾರಿಕೋದ್ಯಮಯ ಚಟುವಟಿಕೆಯೂ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ನೂತನ ಸೇವೆ ಸಹಾಯಕವಾಗಲಿದೆ ಎಂದರು.
ಪ್ರಸ್ತುತ ಏರ್‌ಕ್ರಾಫ್ಟ್‌ಗಳನ್ನು ಖರೀದಿಸುವುದು ಅಂತಹ ಕಷ್ಟವೇನಲ್ಲ. ಆದರೆ ಅವುಗಳಿಗೆ ಪೈಲೆಟ್‌ಗಳನ್ನು ನೇಮಕ ಮಾಡುವುದು ಬಹಳ ತ್ರಾಸದಾಯಕವಾಗಿದೆ. ಸ್ಥಳೀಯವಾಗಿ ಪೈಲೆಟ್‌ಗಳು ಸಿಗುವುದಿಲ್ಲ. ವಿದೇಶಿ ಪೈಲೆಟ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಪ್ರತಿಭೆಗಳನ್ನು ಬೆಳೆಸುವ ಮತ್ತು ವಾಯುಯಾನ ಮೂಲಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮೈಸೂರಿನಲ್ಲಿ ಏವಿಯೇಷನ್ ಅಕಾಡೆಮಿಯನ್ನು ಸ್ಥಾಪಿಸಲು ಏರ್ ಕೇರಳ ಸಂಸ್ಥೆಯು ಸಹಕರಿಸುವುದಾಗಿ ತಿಳಿಸಿದೆ. ಇದರಿಂದ ವಾಯುಯಾನ ವೃತ್ತಿಪರರಿಗೆ ವಿಶ್ವ ದರ್ಜೆಯ ತರಬೇತಿ ನೀಡಬಹುದು ಎಂದರು.
ಏರ್ ಕೇರಳ ಅಧ್ಯಕ್ಷ ಅಫಿ ಅಹಮ್ಮದ್ ಮಾತನಾಡಿ, ಕೇರಳದ ಯಾವ ಸ್ಥಳದಿಂದ ಸೇವೆ ಆರಂಭಿಸಬೇಕು ಎಂಬುದು ಇನ್ನೂ ನಿಗಧಿಯಾಗಿಲ್ಲ. ಆದರೆ ಮೈಸೂರಿಗೆ ಸೇವೆಯನ್ನು ಪಕ್ಕಾ ನಿಗದಿಗೊಳಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೈಸೂರು ಅಧಿಕಾರಿಗಳು ನೂತನ ಸೇವೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ನಾವು ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ನಿರಂತರವಾಗಿ ಯಾನ ಇರಲಿ
ಈ ಹಿಂದೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ಸೇರಿದಂತೆ ಬೇರೆ ಕಡೆ ಕಾರ್ಯಾಚರಣೆ ಮಾಡುತ್ತಿದ್ದ ವಿಮಾನಗಳು ಅಚಾನಕ್ ಆಗಿ ಕಾರ್ಯಾಚರಣೆ ನಿಲ್ಲಿಸಿ ಬಿಡುತ್ತಿದ್ದವು ಎಂದು ಸಭೆಯಲ್ಲಿದ್ದ ಉದ್ಯಮಿಗಳು ಬೇಸರ ವ್ಯಕ್ತಪಡಿಸಿದರು.
ವಿಮಾನಯಾನ ಸ್ಥಗಿತ ಕುರಿತು ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಇದರಿಂದ ಬಹಳ ಮಂದಿ ವಿಮಾನದ ಸಹವಾಸವೇ ಬೇಡ ಎನ್ನುತ್ತಿದ್ದರು. ಇಂತಹ ಸಮಸ್ಯೆಯು ನಿಮ್ಮ ಸಂಸ್ಥೆಯಿಂದ ಆಗಬಾರದು. ಯಾನ ನಿರಂತರವಾಗಿ ಇರಬೇಕು ಎಂದು ಸಲಹೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ, ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಜಿ.ಆರ್. ಅನೂಪ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಸ್ಕಾಲ್ ಅಧ್ಯಕ್ಷ ಜಯಕುಮಾರ್, ಏರ್ ಕೇರಳ ಉಪಾಧ್ಯಕ್ಷ ಅಯೂಬ್ ಕಲ್ಲಡ, ಸಿಇಒ ಹರೀಶ್ ಕುಟ್ಟಿ, ಗ್ರೌಂಡ್ ಆಪರೇಷನ್ಸ್ ಮುಖ್ಯಸ್ಥ ಶಾಮನ್ ಪಟ್ಟವಾತುಕಲ್ ಇತರರು ಇದ್ದರು.
ರನ್ ವೇ ವಿಸ್ತರಣೆಗೆ ಭೂಸ್ವಾಧೀನ
ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದ್ದು, 45 ಎಕರೆ ಪ್ರದೇಶ ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪ್ರಕ್ರಿಯೆ ನಡೆಸಿದ್ದಾರೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ರನ್‌ವೇ ವಿಸ್ತರಣೆಯ ಮಾರ್ಗದಲ್ಲಿ ಮೂರು ನೀರಾವರಿ ಕಾಲುವೆಗಳು ಹೋಗಿವೆ. ಇವುಗಳಿಗೆ ಬಾಕ್ಸ್ ಮಾದರಿ ಸುರಂಗ ನಿರ್ಮಾಣ ಮಾಡಬೇಕು. ಕೆಪಿಟಿಸಿಎಲ್‌ನ ಹೈಟೆನ್ಷನ್- ಲೋ ಟೆನ್ಷನ್ ವಿದ್ಯುತ್ ಮಾರ್ಗಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಕಾರ್ಯಗಳು ಪೂರ್ಣಗೊಂಡಲ್ಲಿ ಮೊದಲ ಹಂತದ ರನ್ ವೇ ವಿಸ್ತರಣೆ ಕಾರ್ಯ ಆರಂಭಿಸಬಹುದು. ಬಳಿಕ ದೊಡ್ಡ ವಿಮಾನ ಹಾರಾಟ ನಡೆಯಲಿದೆ ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸೇವೆಯನ್ನು ಆರಂಭಿಸುವಂತೆ ದೇಶದಲ್ಲಿರುವ ಇತರೆ ವಾಯುಯಾನ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.