Gun-fire ಶಿರಸಿಯಲ್ಲಿ ನಡೆದ ದಾರುಣ ಘಟನೆ 9 ವರ್ಷದ ಬಾಲಕ ಸಾವು

Gun-fire
Published on

ಶಿರಸಿ Gun-fire: ಅಡಕೆ ತೋಟಕ್ಕೆ ಆಗಮಿಸುತ್ತಿದ್ದ ಮಂಗಗಳನ್ನು ಹೊಡೆಯುವವ ಹಿಡಿದ್ದಿದ್ದ ಏರ್ ಗನ್ ಜೊತೆ ಆಟವಾಡಲು ಹೋದ ಮಕ್ಕಳು ಟ್ರಿಗರ್ ಜಗ್ಗಿದ ಪರಿಣಾಮವಾಗಿ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ತಾಲೂಕಿನ ಸೋಮನಳ್ಳಿಯಲ್ಲಿ ಶುಕ್ರವಾರ ಸಂಭವಿಸಿದೆ. ಕರಿಯಪ್ಪ (9) ಮೃತಪಟ್ಟ ದುರ್ದೈವಿ ಬಾಲಕ. ಇಲ್ಲಿಯ ರಾಘವೇಂದ್ರ ಕೇಶವ ಹೆಗಡೆ ಅವರ ಮನೆಯಂಗಳದಲ್ಲಿ ಈ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ತಿಪಟೂರು ಗ್ರಾಮದ ಬಸಪ್ಪ ಉಂಡಿಯರ್ ಎಂಬವರು ಹಲವು ವರ್ಷಗಳಿಂದ ರಾಘವೇಂದ್ರ ಹೆಗಡೆ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮೂವರು ಮಕ್ಕಳು ಸ್ಥಳೀಯ ಶಾಲೆಗೆ ಹೋಗುತ್ತಿದ್ದರಲ್ಲದೇ ರಜೆಯ ದಿನಗಳಲ್ಲಿ ರಾಘವೇಂದ್ರ ಹೆಗಡೆ ಅವರ ಮನೆಯಂಗಳದಲ್ಲಿಯೇ ಆಟವಾಡುತ್ತಿದ್ದರು. ಶುಕ್ರವಾರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದುದರಿಂದ ಮಕ್ಕಳು ರಾಘವೇಂದ್ರ ಅವರ ಮನೆಯಂಗಳದಲ್ಲಿ  ಆಟವಾಡಿಕೊಂಡಿದ್ದರು.

Gun-fire

ಅಡಕೆ ತೋಟಕ್ಕೆ ಮಂಗನ ಹಾವಳಿ ಹೆಚ್ಚಾದ ಕಾರಣ ರಾಘವೇಂದ್ರ ಹೆಗಡೆ ನಿತೀಶ್ ಎಂಬವನ್ನು ಮಂಗನ ಕಾವಲಿಗೆ ನೇಮಕ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಎಂದಿನಂತೆ ಏರ್ ಗನ್ ಹಿಡಿದ ನಿತೀಶ್ ತೋಟದೆಡೆ ಸಾಗಿದ್ದಾರೆ. ಈ ವೇಳೆ ಅಲ್ಲಿಗೆ ಆಗಮಿಸಿದ ಮಕ್ಕಳಲ್ಲಿ ಓರ್ವ ಆಟವಾಡುವ ಭರದಲ್ಲಿ ಏರ್ ಗನ್ ನ ಟ್ರಿಗರ್ ಜಗ್ಗಿಬಿಟ್ಟಿದ್ದಾನೆ. ಏರ್ ಗನ್ ಗುಂಡು ಹಾರಿ ಎದುರುಗಡೆ ನಿಂತಿದ್ದ ಬಾಲಕ ಕರಿಯಪ್ಪನ ಎದೆಗೆ ಹೊಕ್ಕಿದ್ದರಿಂದ ಆತ ಸ್ಥಳದಲ್ಲೇ ಬಿದ್ದಿದ್ದಾನೆ. ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ. ಈ ಎಲ್ಲ ಘಟನಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಎಎಸ್‌ಪಿ  ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಏರ್ ಗನ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ  ತೋರಿದ ಕಾರಣದಿಂದಾಗಿ ನಿತೀಶ್ ಅವರನ್ನು ಬಂಧಿಸಲಾಗಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net