ವಾಯುಸೇನೆಗೂ ಮುಧೋಳ ಶ್ವಾನ!

mudhola dog
Published on

ಮುಧೋಳ(ಬಾಗಲಕೋಟೆ): ಭಾರತೀಯ ಸೇನಾ ಸೇರ್ಪಡೆ ಮೂಲಕ ಸದ್ದು ಮಾಡಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ವಾಯುಸೇನೆಯನ್ನೂ ಸೇರಲಿವೆ.

ಉತ್ತರಪ್ರದೇಶ ಆಗ್ರಾದ ಏರ್​ಫೋರ್ಸ್ ಕೇಂದ್ರದಿಂದ ಜಿಲ್ಲೆಯ ತಿಮ್ಮಾಪುರದ ಮುಧೋಳ ಶ್ವಾನ ಸಂವರ್ಧನೆ ಕೇಂದ್ರಕ್ಕೆ ನಾಲ್ಕು ನಾಯಿ ನೀಡಲು ಬೇಡಿಕೆ ಸಲ್ಲಿಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಧೋಳ ನಾಯಿಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ದೇಶದ ಜನರಿಗೆ ಮಾಹಿತಿ ನೀಡಿದ್ದರು. ಮುಧೋಳ ನಾಯಿಗೆ ವಿಶೇಷ ತರಬೇತಿ ನೀಡಿ ಸಿಐಎಸ್​ಎಫ್ ಸೇನೆ, ಎನ್​ಎಸ್​ಜಿ ಸೇರಿ ರಕ್ಷಣಾ ಪಡೆಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಈ ತಳಿಯು ಬಾಂಬ್ ಪತ್ತೆ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಪೊಲೀಸರಿಗೆ, ರಕ್ಷಣಾ ಪಡೆಗೆ ನೆರವಾಗುತ್ತಿದೆ.

ಮುಧೋಳ ನಾಯಿ ಈಗಾಗಲೇ ಭೂಸೇನೆಗೆ ಸೇರಿದ್ದು, ಅಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಈಗ ಆಗ್ರಾದಲ್ಲಿರುವ ವಾಯುಸೇನೆ ಅಧಿಕಾರಿಗಳು ಎರಡು ಗಂಡು, ಎರಡು ಹೆಣ್ಣು ಸೇರಿ ನಾಲ್ಕು ಮುಧೋಳ ನಾಯಿಮರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಈಗಾಗಲೇ ಒಂದು ತಿಂಗಳಿಂದ ಪತ್ರ ವ್ಯವಹಾರ ನಡೆದಿದೆ.

| ಡಾ.ಮಹೇಶ ಆಕಾಶಿ ಮುಖ್ಯಸ್ಥರು ಶ್ವಾನ ಸಂಶೋಧನಾ, ಸಂವರ್ಧನ ಕೇಂದ್ರ ತಿಮ್ಮಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net