

ಹುಬ್ಬಳ್ಳಿ : ಏರ್ ಕ್ರ್ಯಾಶ್ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಕೈಗೊಳ್ಳಬೇಕಿರುವ ಕಾರ್ಯಾಚರಣೆ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಕಲ್ಪಿತ ಕಾರ್ಯಾಚರಣೆ (ಮಾಕ್ ಡ್ರಿಲ್) ನಡೆಸಲಾಯಿತು.
ವಿಮಾನದ ಮಾದರಿಯೊಂದು ರನ್ವೇ ಗೆ ಇಳಿಯುತ್ತಿದ್ದಂತೆಯೇ ಪೈಲಟ್ ನಿಯಂತ್ರಣ ತಪ್ಪಿ, ಇಡೀ ವಿಮಾನಕ್ಕೆ ಬೆಂಕಿ ಹತ್ತಿತು. ತಕ್ಷಣ ವಿಮಾನ ನಿಲ್ದಾಣದಲ್ಲಿ ಸೈರನ್ ಶಬ್ಧ ಕೇಳತೊಡಗಿತು. ಏರ್ಪೋರ್ಟ್ ರೆಸ್ಕೂ ್ಯ ಆಂಡ್ ಫೈರ್ ಫೈಟಿಂಗ್ ಸರ್ವಿಸ್ನ (ಎಆರ್ಎಫ್ಎಸ್) ಮೂರು ಫೈರ್ ಇಂಜಿನ್ಗಳು ಬೆಂಕಿ ನಂದಿಸಲು ಪ್ರಾರಂಭಿಸಿದವು.
ವಿಮಾನ ನಿಲ್ದಾಣದ ಭದ್ರತಾ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯುವ ಪ್ರಯತ್ನ ನಡೆಸಿದರು. ಹತ್ತಾರು ಅಂಬ್ಯುಲೆನ್ಸ್ಗಳು ಬಂದು ನಿಂತವು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರನ್ನು ಅಂಬ್ಯುಲೆನ್ಸ್ನಲ್ಲಿ ಕೂರಿಸುತ್ತಿದ್ದಂತೆಯೇ ಆಸ್ಪತ್ರೆಯತ್ತ ಧಾವಿಸಿದವು.
ಇತ್ತೀಚೆಗೆ ಅಹಮಾದಾಬಾದ್ನಲ್ಲಿ ವಿಮಾನ ನಿಲ್ದಾಣ ಪಕ್ಕದ ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದ ಭೀಕರ ದುರಂತದ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಏರ್ ಕ್ರ್ಯಾಶ್ ಸಂಭವಿಸಿದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಬಗ್ಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ಕ್ರ್ಯಾಶ್ನ ಮಾಕ್ ಡ್ರಿಲ್ ನಡೆಸಲಾಯಿತು.
ವಿಮಾನ ರನ್ ವೇನಲ್ಲಿ ಇಳಿಯುವಾಗ ಹಾಗೂ ರನ್ ವೇದಿಂದ ಮೇಲೆ ಹಾರುವಾಗ ಸಂಭವಿಸಬಹುದಾದ ಅಪಘಾತದಲ್ಲಿ ಪ್ರಯಾಣಿಕರ ರಕ್ಷಣೆ, ವಿಮಾನಕ್ಕೆ ಹತ್ತಿದ ಬೆಂಕಿ ನಂದಿಸುವುದು, ಪ್ರಯಾಣಿಕರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಕಲ್ಪಿತ ಕಾರ್ಯಾಚರಣೆ ನಡೆಯಿತು.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಟರ್ವಿುನಲ್ ಮ್ಯಾನೇಜರ್ ಪ್ರತಾಪ ಬಿ.ವಿ., ಭದ್ರತಾ ಮುಖ್ಯಸ್ಥ ಈರಪ್ಪ ವಾಲಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.