

ಮೈಸೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು, ಅಪಘಾತ ಸಂಭವಿಸಿದ ತಕ್ಷಣ ಜನರ ಜೀವ ಉಳಿಸಲು ಐಕ್ಯಾಟ್ ಪ್ರತಿಷ್ಠಾನದಿಂದ ಏರ್ ಆಂಬುಲೆನ್ಸ್ ಪ್ರಾರಂಭಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಪ್ರತಿಷ್ಠಾನದ ನಿರ್ದೇಶಕಿ ಡಾ. ಶಾಲಿನಿ ನಲ್ವಾಡ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಸಿ.ಎನ್. ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾದವರಿಗೆ ಏರ್ ಆಂಬುಲೆನ್ಸ್ ಸೇವೆ ಉಚಿತವಾಗಿ ದೊರೆಯುವಂತೆ ಮಾಡುವುದು ನಮ್ಮ ಪ್ರತಿಷ್ಠಾನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ನಮ್ಮ ಈ ಕಾರ್ಯಕ್ಕೆ ಕೈಜೋಡಿಸುವ ಭರವಸೆ ನೀಡಿದ್ದಾರೆ. ಕೇವಲ ಬೆಂಗಳೂರು-ಮೈಸೂರು ಮಾತ್ರವಲ್ಲದೆ ದೇಶಾದ್ಯಂತ ಈ ಸೇವೆ ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅಲೋಕ್ ಕುಮಾರ್ ಅವರೊಂದಿಗೆ ನಡೆಸಿರುವ ಮಾತುಕತೆ ಫಲಪ್ರದವಾದರೆ ಇನ್ನು 6 ತಿಂಗಳ ಒಳಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಏರ್ ಆಂಬುಲೆನ್ಸ್ ಸೇವೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. 20 ರಿಂದ 44 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಅಪಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ದೊರೆತರೆ ಅವರ ಜೀವ ಉಳಿಸಬಹುದು. ಸಾಕಷ್ಟು ಪ್ರಕರಣ ಗಳಲ್ಲಿ ತುರ್ತು ಚಿಕಿತ್ಸೆ ದೊರೆಯದೆ ಹಲವಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಏರ್ ಆಂಬುಲೆನ್ಸ್ ಸೇವೆ ದೊರೆತರೆ ತಕ್ಷಣ ಅಪಘಾತಕ್ಕೀಡಾದವರಿಗೆ ಚಿಕಿತ್ಸೆ ದೊರೆಯುವಂತೆ ಮಾಡಬಹುದು. ಇದರಿಂದ ಅಪಘಾತದಲ್ಲಿ ಮೃತಪಡುವವರ ಪ್ರಮಾಣವನ್ನು ಶೇ.40 ರಷ್ಟು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ವಿಶ್ವದಲ್ಲಿರುವ ವಾಹನಗಳ ಪೈಕಿ ಶೇ.10 ರಷ್ಟು ವಾಹನ ಮಾತ್ರ ನಮ್ಮ ದೇಶದಲ್ಲಿ ಇವೆ. ಆದರೆ, ಅಪಘಾತ ಪ್ರಮಾಣ ಮಾತ್ರ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ಉದಾಹರಣೆಗೆ ವಿಶ್ವದಲ್ಲಿ ರಸ್ತೆ ಅಪಘಾತದಲ್ಲಿ 10 ಜನರು ಮೃತಪಟ್ಟರೆ ಅದರಲ್ಲಿ ಒಬ್ಬರು ಭಾರತೀಯರು ಇದ್ದೇ ಇರುತ್ತಾರೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸರಾಸರಿ 2,500 ಕೋಟಿ ರೂ. ವಿನಿಯೋಗಿಸಲಾಗುತ್ತದೆ. ಆದರೆ, ಆ ಹೆದ್ದಾರಿಯಲ್ಲಿ ಪ್ರತಿ ವರ್ಷ ಜನರು ಜೀವ ಕಳೆದುಕೊಂಡು ಅದರಿಂದ ಉಂಟಾಗುತ್ತಿರುವ ನಷ್ಟ 25,000 ಕೋಟಿ ರೂ.ಗಳು. ಈ ನಷ್ಟವನ್ನು ತಡೆಗಟ್ಟಲು ಏರ್ ಆಂಬುಲೆನ್ಸ್ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆಯು ರಾಜ್ಯದಲ್ಲಿ 28 ಸಾವಿರ ಜನರಿಗೆ ಒಂದೇ ದಿನದಲ್ಲಿ ಸಿಪಿಆರ್ ಕುರಿತು ತರಬೇತಿ ನೀಡಿ ದಾಖಲೆ ನಿರ್ಮಿಸಿದ್ದೇವೆ. ಇದುವರೆಗೆ ಒಟ್ಟು 43 ಸಾವಿರ ಜನರಿಗೆ ಸಿಪಿಆರ್ ತರಬೇತಿ ನೀಡಿದ್ದೇವೆ. ಇದರಿಂದ ತುರ್ತು ಸಂದರ್ಭದಲ್ಲಿ ಸಿಪಿಆರ್ ನೀಡಿ ಅಮೂಲ್ಯ ಜೀವ ಉಳಿಸಬಹುದು. ಹಲವಾರು ತುರ್ತು ಸಂದರ್ಭದಲ್ಲಿ ದೇಶ ಹಾಗೂ ವಿದೇಶದಲ್ಲಿ ನಮ್ಮ ಸಂಸ್ಥೆಯು ಏರ್ ಆಂಬುಲೆನ್ಸ್ ಸೇವೆ ನೀಡಿದೆ. ಏರ್ ಆಂಬುಲೆನ್ಸ್ ಸೇವೆಯಲ್ಲಿ ನಾವು ವಿಶ್ವ ದಾಖಲೆ ನಿರ್ಮಾಣ ಮಾಡಿದ್ದೇವೆ. 2018ರಲ್ಲಿ ಕೇರಳದಲ್ಲಿ ಜಲಪ್ರಳಯ ಸಂಭವಿಸಿದ ಸಂದರ್ಭ ಹಾಗೂ ಹಲವು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವು ಏರ್ ಅಂಬುಲೆನ್ಸ್ ಸೇವೆಯನ್ನು ಒದಗಿಸಿದ್ದೇವೆ. ಈ ಹಿಂದೆ ದೇಶದಲ್ಲಿ ಮಾನವ ಅಂಗಾಂಗಗಳನ್ನು ಸಕಾಲದಲ್ಲಿ ಒಂದು ಸ್ಥಳದಿಂದ ಸಾಗಿಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅಂಗಾಂಗಗಳು ಬಳಕೆಯಾಗದೆ ನಾಶವಾಗುತಿತ್ತು. ಆದರೆ, ನಾವು ಏರ್ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ ನಂತರ ಅಂಗಾಂಗಗಳು ಬಳಕೆಯಾಗದೆ ನಾಶವಾಗುತ್ತಿರುವ ಪ್ರಮಾಣ ತಗ್ಗಿದೆ ಎಂದರು.
ಡಾ.ಮೃತ್ಯುಂಜಯಪ್ಪ ಅವರು ನನ್ನ ಚಿಕ್ಕಪ್ಪ. ರೋಗಿಗಳ ಸಂಬಂಧಿಕರು ಅವರ ಮನೆಗೆ ಬಂದು ಮಧ್ಯರಾತ್ರಿ ಕರೆದರೂ ಸಹ ಕೋಪಗೊಳ್ಳದೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು. ಅವರ ಸೇವಾ ಮನೋಭಾವ, ಅವರ ಆದರ್ಶ ಜೀವನ ನನಗೆ ಸ್ಫೂರ್ತಿ ಹಾಗೂ ಜೀವನದ ಹಾದಿ ತೋರಿಸಿತು. ಅವರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿ ಸಂತಸ ತಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಏರ್ ಆಂಬುಲೆನ್ಸ್ ಸೇವೆ ದೊರೆತರೆ ಅವರ ಅಮೂಲ್ಯವಾದ ಜೀವ ಉಳಿಸಬಹುದು. ಈ ರೀತಿಯ ಸೇವೆ ನೀಡುತ್ತಿರುವ ವಿಶ್ವದ ಕೆಲವೇ ಕೆಲವು ಮಹಿಳೆಯರಲ್ಲಿ ಡಾ.ಶಾಲಿನಿ ನಲ್ವಾಡ್ ಕೂಡ ಒಬ್ಬರು. ಜನರ ಜೀವ ಉಳಿಸುವುದು ಸುಲಭದ ಮಾತಲ್ಲ. ಆದರೆ, ಈ ನಿಟ್ಟಿನಲ್ಲಿ ಐಕ್ಯಾಟ್ ಸಂಸ್ಥೆ ಪ್ರಮಾಣಿಕವಾಗಿ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ದಾನಿ ಸುಧಾ ಮೃತ್ಯುಂಜಯಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇದ್ದರು.