ಐನ್ಮನೆ ಕಪ್: ಮುಲ್ಲೈರಿರ ತಂಡ ಸಮಗ್ರ ಚಾಂಪಿಯನ್

24adarshkdga4 - Copy
Published on

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಐರಿ ಜನಾಂಗದ ಕ್ರೀಡಾಕೂಟದಲ್ಲಿ ಕೆದಮುಳ್ಳೂರು ಗ್ರಾಮದ ಮುಲ್ಲೈರಿರ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.


ಒಟ್ಟು ಏಳು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಮುಲ್ಲೈರೀರ ತಂಡ ಒಟ್ಟು ೧೨೦ ಅಂಕಗಳನ್ನು ಕಲೆ ಹಾಕಿ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ೩೦ ಸಾವಿರ ರೂ ಮೌಲ್ಯದ ಅತ್ಯಾಕರ್ಷಕ ಐನ್ಮನೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.


ಪುರುಷರ ಕ್ರಿಕೆಟನಲ್ಲಿ ಬಲ್ಲಮಾವಟಿ ಐರೀರ ತಂಡ ಎಂಟನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದಲ್ಲಿ ಬಲ್ಲಮಾವಟಿ ತಂಡ ಮತ್ತು ಕಳೆದ ಬಾರಿಯ ಚಾಂಪಿಯನ್ ತಟ್ಟಂಡ ಬೊಮ್ಮಂಜಿಕೆರೆ ತಂಡ ಮುಖಾಮುಖಿಯಾಯಿತು. ಮೊದಲು ಬ್ಯಾಟ್ ಮಾಡಿದ ಬಲ್ಲಮಾವಟಿ ತಂಡ ೮ ಓವರ್ಗಳಲ್ಲಿ ೯೯ ಗಳ ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ತಟ್ಟಂಡ ತಂಡ ನಿಗದಿತ ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಲಷ್ಟೇ ಶಕ್ತವಾಯಿತು.


ವಿಜೇತ ತಂಡ ೨೦ ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರೆ, ರನ್ನರ್ ಅಪ್ ತಂಡ ೧೫ ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಜಯಿಸಿತು. ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಬಿಟ್ಟಂಗಾಲ ಗ್ರಾಮದ ಬಹುತೇಕ ಹಿರಿಯ ಮಹಿಳೆಯರನ್ನೇ ಒಳಗೊಂಡಿದ್ದ ಆಲೇಂಗಡ ತಂಡ ಅಮ್ಮಣಂಡ ಹೊದ್ದೂರು ತಂಡವನ್ನು ಮಣಿಸಿ ಚಾಂಪಿಯನ್ನಾಗಿ ಹೊರ ಹೊಮ್ಮಿತು. ವಿಜೇತ ತಂಡ ಐದು ಸಾವಿರ ರೂ ನಗದು ಮತ್ತು ಟ್ರೋಫಿ ಮುಡಿಗೇರಿಸಿಕೊಂಡರೆ, ರನ್ನರ್ ಅಪ್ ತಂಡ ೩೦೦೦ ರೂ ನಗದು ಮತ್ತು ಟ್ರೋಫಿ ಗೆದ್ದುಕೊಂಡಿತು. ಉಳಿದಂತೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಳುಗೋಡು ಏಕಲವ್ಯ ವಸತಿ ಶಾಲೆ ಪ್ರಾಂಶುಪಾಲ ಐನಂಗಡ ದಿಲನ್ ಮುತ್ತಣ್ಣ ಮಾತನಾಡಿ ಇತ್ತೀಚೆಗೆ ಐರಿ ಜನಾಂಗದಲ್ಲಿ ಸಾಧಕರು ಹೆಚ್ಚುತ್ತಿರುವುದು ಬಹಳ ಸಂತಸದ ವಿಷಯ. ಐರಿ ಜನಾಂಗದ ಏಳಿಗೆ ಮತ್ತು ಒಗ್ಗಟಿಟಿಗೆ ನಾವೆಲ್ಲರೂ ಐರಿ ಸಮಾಜಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.


ಐರಿ ಮಕ್ಕಡ ಕೂಟದ ನಿರ್ದೇಶಕ, ವಕೀಲ ಐಮಂಡ ಶಬರಿ ನಾಚಪ್ಪ ಮಾತನಾಡಿ, ಐರಿ ಜನಾಂಗದ ಯುವಜನತೆ ಐನ್ಮನೆ ಟ್ರೋಫಿಯಂತಹ ಕ್ರೀಡಾಕೂಟ ಆಯೋಜಿಸುವ ಮೂಲಕ ಜನಾಂಗದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.


ಇದೇ ಸಂದರ್ಭ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪ್ರಮುಖ ಅಗ್ನಿಶಾಮಕ ಬೊಳ್ಳನಮಂಡ ಉತ್ತಪ್ಪ, ಮುಖ್ಯಮಂತ್ರಿ ಪದಕ ವಿಜೇತ ಕೆಎಸ್‌ಆರ್ಟಿಸಿ ಚಾಲಕ ತಟ್ಟಂಡ ಸತೀಶ್, ಸಮಾಜ ಸೇವಕ ಪೊನ್ನೀರ ಸ್ನೇಕ್ ಗಗನ್, ಡಾ ಐನಂಗಡ ದಿಲನ್ ಮುತ್ತಣ್ಣ, ಎನ್ಸಿಸಿ ಸಾಧಕ ಅಪ್ಪಚ್ಚಂಡ ಪ್ರಜ್ವಲ್, ಸಿನಿಮಾ ನಾಯಕ ನಟ ಮಾಲೆರ ಪ್ರಮೋದ್ ಬೋಪಣ್ಣರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಐನಂಗಡ ಚಿತ್ರಾ ಕಾರ್ಯಪ್ಪ, ಐರಿ ಸಮಾಜ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಅಧ್ಯಕ್ಷ ಮೇಲತ್ತಂಡ ರಮೇಶ್, ಬೋಳೈರಿರ ದಿನೇಶ್, ಸೋನಿ ಶ್ರೀರಾಗ್, ರಿಚಾ ಸುಭಾಷ್, ಐರೀರಾ ತಾರಾ ವಿಜಯ್ ರೋಷನ್ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net