ಬ್ಲಾಕ್‌ಸ್ಪಾಟ್ ಶಾಶ್ವತ ನಿರ್ಮೂಲನೆಗೆ ಗುರಿ: ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್

comsr meeting
Published on

ಬೆಂಗಳೂರು: ನಗರದಲ್ಲಿ ಕಸ ಸುರಿಯುವ ಸ್ಥಳಗಳನ್ನು (ಬ್ಲಾಕ್ ಸ್ಪಾಟ್) ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ ಎಂದು ಸಂಸ್ಥೆಯ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ತಿಳಿಸಿದರು.

ಪಾಲಿಕೆಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಸಂಬಂಧಿಸಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಎಲ್ಲೆಡೆ ಶಾಶ್ಚತವಾಗಿ ಬ್ಲಾಕ್‌ಸ್ಪಾಟ್‌ಗಳನ್ನು ನಿವಾರಿಸಬೇಕಿದೆ. ಅದಕ್ಕಾಗಿ ವಲಯವಾರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೂಲದಲ್ಲಿಯೇ ಗೊಬ್ಬರ ತಯಾರಿಕಾ ಘಟಕ, ಬಯೋ ಮಿಥನೈಜೇಷನ್ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರಸ್ತೆ ಬದಿ ಕಸ ಬಿಸಾಡುವವರ ಮೇಲೂ ನಿಗಾವಹಿಸಿ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ಲಾಸ್ಟಿಕ್ ನಿಯಂತ್ರಿಸಲು ಅಭಿಯಾನ:

ಪೂರ್ವ ವಲಯ ಆಯುಕ್ತೆ ಸ್ನೇಹಲ್ ಮಾತನಾಡಿ, ಕಸದ ಸಮಸ್ಯೆ ನಿವಾರಣೆಗಾಗಿ ಸಮಗ್ರ ಯೋಜನೆ ರೂಪಿಸಲಾಗುವುದು. ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಅಭಿಯಾನ ಕೈಗೊಳ್ಳಲು ಚಿಂತನೆ ನಡೆದಿದೆ. ನಾಗರಿಕರು ಕಸದ ಸಮಸ್ಯೆ ಎದುರಿಸುತ್ತಿದ್ದಲ್ಲಿ ವಾಟ್ಸ್‌ಅಪ್ ಸಂಖ್ಯೆ 9448197197 ಗೆ ಸಂದೇಶದ ಮೂಲಕ ದೂರು ನೀಡಬಹುದು. ಜತೆಗೆ ಟೋಲ್ ಫ್ರೀ ಸಂಖ್ಯೆ 1533 ಗೂ ಸಂದೇಶ ರವಾನಿಸಬಹುದು ಎಂದರು.

ಸಭೆಯಲ್ಲಿ ಘನತ್ಯಾಜ್ಯ ನಿಗಮದ ಸಿಇಒ ಡಾ. ಕೆ.ಹರೀಶ್ ಕುಮಾರ್, ಸಿಒಒ ರಮಾಮಣಿ, ಜಂಟಿ ಆಯುಕ್ತೆ ಸರೋಜಾ, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಲೋಕೇಶ್, ಸುಗುಣಾ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.

ನಾಗರಿಕರು ವ್ಯಕ್ತಪಡಿಸಿದ ಪ್ರಮುಖ ಸಲಹೆ:

* ರಸ್ತೆ ಬದಿ, ಖಾಲಿ ಜಾಗ, ರಾಜಕಾಲುವೆಗಳಿಗೆ ತ್ಯಾಜ್ಯ ಬಿಸಾಡುವಿಕೆಗೆ ಪ್ರಥಮ ಆದ್ಯತೆ ನೀಡಬೇಕು.

* ಇಂದಿರಾನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ಆಟೋ ಟಿಪ್ಪರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

* ಹಸಿ/ಒಣ ತ್ಯಾಜ್ಯಕ್ಕೆ ಪ್ರತ್ಯೇಕ ಬಿನ್‌ಗಳ ವ್ಯವಸ್ಥೆ ಮಾಡಿ, ಮಿಶ್ರ ತ್ಯಾಜ್ಯ ಸಂಗ್ರಹ ತಡೆಯಿರಿ.

* ತ್ಯಾಜ್ಯ ವಿಲೇವಾರಿ ಮಾಡುವ ಕುರಿತು ಮನೆ-ಮನೆ ಜಾಗೃತಿ ಮೂಡಿಸಬೇಕು.

* ಏಕ ಬಳಕೆ ಪ್ಲಾಸ್ಟಿಕ್ ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಿ.

* ಆಯಾ ವಾರ್ಡ್ ವ್ಯಾಪ್ತಿಯಲ್ಲೇ ಕಾಂಪೋಸ್ಟರ್ ವ್ಯವಸ್ಥೆ ಕಲ್ಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net