ಕರೊನಾ ಸೇನಾನಿಗಳ ಸೇವೆ ಅನನ್ಯ

AML KODUGE
Published on

ಐಮಂಗಲ: ಕರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು ಎಂದು ರೆಡ್‌ಕ್ರಾಸ್ ಸಂಸ್ಥೆಯ ತಾಲೂಕು ಸದಸ್ಯ ಹಾಗೂ ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಸಿ.ನಾರಾಯಣಾಚಾರ್ ಹೇಳಿದರು.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಹಿರಿಯೂರಿನ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಭರಂಪುರ, ಗುಯಿಲಾಳು ಮತ್ತು ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಆಹಾರದ ಕಿಟ್ ಹಾಗೂ ಕೊಡೆ ವಿತರಿಸಿ ಮಾತನಾಡಿದರು.

ಕರೊನಾ ವಿಶ್ವವ್ಯಾಪಿ ಹರಡುತ್ತಿದ್ದು, ಜನರು ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವ ಮೂಲಕ ಈ ಕಾಯಿಲೆಯಿಂದ ರಕ್ಷಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಬಿಸಿಲು ಮಳೆ ಎನ್ನದೇ ಕರೊನಾ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಸಹ ಕಾರ್ಯದರ್ಶಿ ಜೋಗಪ್ಪ, ಡಿ.ದೇವರಾಜ್ ಮೂರ್ತಿ, ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಗೌಡರ್, ಸಿಬ್ಬಂದಿ ರಮೇಶ್, ಮಂಜುಳಾ, ರಾಜೇಶ್ವರಿ, ಜಯಣ್ಣ, ಅಂಜಿನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net