2,13,082 ಮಕ್ಕಳಿಗೆ ಲಸಿಕೆ ಹಾಕುವ ಗುರಿ

carona
Published on

ಧಾರವಾಡ: ಪೋಲಿಯೋ ಮುಕ್ತ ರಾಷ್ಟ್ರ ನಿರ್ವಣಕ್ಕೆ ದೇಶಾದ್ಯಂತ ಜ. 17ರಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಜಿಲ್ಲಾದ್ಯಂತ 2,13,082 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ, ಕೋವಿಡ್ ಲಸಿಕಾಕರಣ ಕುರಿತ ಕಾರ್ಯಪಡೆ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಕೋವಿಡ್ ಸುರಕ್ಷತೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯ ಒಳಗೆ ಹೋಗದೆ ಮಗುವನ್ನು ಹೊರಗೆ ಕರೆಸಬೇಕು. ನೆಗಡಿ, ಕೆಮ್ಮು, ಜ್ವರ ಇರುವ ಮಕ್ಕಳಿಗೆ ಲಸಿಕೆ ಹಾಕುವಾಗ ಪ್ರತ್ಯೇಕತೆಯ ಎಚ್ಚರಿಕೆ ವಹಿಸಬೇಕು. ಕಟ್ಟಡ ನಿರ್ಮಾಣ ಸ್ಥಳ, ಕಾರ್ವಿುಕರ ವಸತಿ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಕಿಟ್​ಗಳನ್ನು ಈ ಬಾರಿ ಜ. 17ರಂದು ಪಲ್ಸ್ ಪೋಲಿಯೋ ಬೂತ್​ಗಳಲ್ಲಿಯೇ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಮಾತನಾಡಿ, ಜಿಲ್ಲೆಯಲ್ಲಿ 888 ಬೂತ್​ಗಳನ್ನು ಸ್ಥಾಪಿಸಲಾಗುವುದು. ಜ. 18ರಿಂದ 20ರವರೆಗೆ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುವುದು. 5 ವರ್ಷದೊಳಗಿನ 2,13,082 ಮಕ್ಕಳನ್ನು ಗುರುತಿಸಲಾಗಿದೆ ಎಂದರು.

ಉಪ ಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಭು ಬಿರಾದಾರ, ಡಿಎಚ್​ಒ ಡಾ. ಯಶವಂತ ಮದೀನಕರ, ಉಪ ವಿಭಾಗಾಕಾರಿ ಡಾ. ಬಿ. ಗೋಪಾಲಕೃಷ್ಣ, ಡಾ. ಸಿದ್ದಲಿಂಗಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಇತರರಿದ್ದರು.

ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ

ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಲಸಿಕಾಕರಣಕ್ಕೆ (ವ್ಯಾಕ್ಸಿನೇಷನ್) 68 ಸರ್ಕಾರಿ ಕಟ್ಟಡಗಳು, 838 ಖಾಸಗಿ ಸೌಲಭ್ಯಗಳು ಸೇರಿ ಒಟ್ಟು 906 ಲಸಿಕಾ ಕೇಂದ್ರಗಳ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಕೋವಿನ್ ಪೋರ್ಟಲ್​ನಲ್ಲಿ 20,843 ವಿವಿಧ ಹಂತಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಈಗಾಗಲೇ ಅಪ್​ಲೋಡ್ ಮಾಡಲಾಗಿದೆ. ಅಗತ್ಯ ಕೋವಿಡ್ ಲಸಿಕೆಯನ್ನು ವೈಜ್ಞಾನಿಕವಾಗಿ ದಾಸ್ತಾನು ಮಾಡಿಕೊಳ್ಳಲು ಸ್ಥಳ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಕೋವಿಡ್ ಸ್ವ್ಯಾಬ್ ಸಂಗ್ರಹ

ಜಿಲ್ಲೆಯ ಖಾಸಗಿ ಜೌಷಧ ಮಳಿಗೆಗಳು ಹಾಗೂ ರಕ್ತ ತಪಾಸಣಾ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕವಾಗಿ ಕೋವಿಡ್ ಪತ್ತೆಗೆ ಮೂಗು ಮತ್ತು ಗಂಟಲು ದ್ರವ ಸಂಗ್ರಹಣೆ ಬೂತ್​ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಜಿಲ್ಲೆಯ ಔಷಧ ವ್ಯಾಪಾರಿಗಳ ಸಹಕಾರ ಅಗತ್ಯ. ಔಷಧ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ಸೇವೆ ನೀಡಿದಂತಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net