19 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಗುರಿ

Oplus_131074
ಸೋಮವಾರಪೇಟೆ ಪಶು ವೈದ್ಯಕೀಯ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಾನುವಾರುಗಳ ಕಾಲುಬಾಯಿ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಶಾಸಕ ಡಾ.ಮಂತರ್‌ಗೌಡ ಅವರು ಚಾಲನೆ ನೀಡಿದರು. ರಾಜಶೇಖರ್, ಸತೀಶ್ ಇದ್ದರು.
Published on

ಸೋಮವಾರಪೇಟೆ: ತಾಲೂಕಿನಾದ್ಯಂತ 19 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಜಾನುವಾರುಗಳ ಮಾಲೀಕರು ತಪ್ಪದೇ ತಮ್ಮ ಪಶುಗಳಿಗೆ ಲಸಿಕೆ ಹಾಕಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.


ಪಶು ವೈದ್ಯಕೀಯ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಾನುವಾರುಗಳ ಕಾಲುಬಾಯಿ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಜಾನುವಾರುಗಳ ಮಾಲೀಕರು ಉದಾಸೀನತೆ ತೋರಬಾರದು ಎಂದರು.


ಅ.21ರಿಂದ ನ.22 ರವರೆಗೆ ಅಭಿಯಾನ ಜರುಗಲಿದ್ದು, 19 ಮಂದಿಯ ತಂಡವನ್ನು ರಚಿಸಲಾಗಿದೆ. ಪ್ರತಿದಿನ ಕನಿಷ್ಟ 100 ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು. ಸಿಬ್ಬಂದಿ ಪ್ರಾಮಾಣಿಕವಾಗಿ ಲಸಿಕೆ ನೀಡಬೇಕು. ಲೆಕ್ಕಕ್ಕಾಗಿ ಲಸಿಕೆಯಲ್ಲ, ಪ್ರಾಮಾಣಿಕ ಸೇವೆಗಾಗಿ ಲಸಿಕೆ ಹಾಕಬೇಕೆಂದು ಸಿಬ್ಬಂದಿಗೆ ಸೂಚಿಸಿದರು.


ಲಸಿಕೆ ನಂತರ ಒಂದು ವೇಳೆ ಅಡ್ಡ ಪರಿಣಾಮ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಸಿದ್ಧರಿದ್ದಾರೆ. ಪಶುಗಳು ಎಲ್ಲೇ ಇದ್ದರೂ ಅಲ್ಲಿಗೆ ತೆರಳಿ ಲಸಿಕೆ ನೀಡಲಾಗುವುದು. ಸರ್ಕಾರ ಉಚಿತವಾಗಿ ಯೋಜನೆ ಜಾರಿಗೆ ತಂದಿದ್ದು, ಪಶುಗಳ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭ ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್ ಸೇರಿದಂತೆ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net