ರೈತರಿಗೆ 100 ಟಿ ಕಾರ್ಟ್ ಒದಗಿಸುವ ಗುರಿ

SUGAR FACTRY
Published on

ಶಿಗ್ಗಾಂವಿ: ಕಬ್ಬಿನ ಕಟಾವು ಹಾಗೂ ಕಾರ್ಖಾನೆಗೆ ಕಬ್ಬು ಸಾಗಿಸುವ ನಿಟ್ಟಿನಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿಸುವುದು ಕಾರ್ಖಾನೆಯ ಮೂಲ ಉದ್ದೇಶವಾಗಿದೆ ಎಂದು ವಿಎನ್​ಎನ್​ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಹೆಬ್ಬಾರ ಹೇಳಿದರು.

ತಾಲೂಕಿನ ಕೋಣನಕೇರಿಯ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಗುರುವಾರ ಕಬ್ಬು ಬೆಳೆಗಾರ ರೈತರಿಗೆ ಟಿ-ಕಾರ್ಟ (ಸಿಂಗಲ್ ಟ್ರೈಲರ್) ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯ ಸುತ್ತಮುತ್ತಲಿನ ಕಬ್ಬು ಬೆಳೆಗಾರರು ಕಬ್ಬು ಕಟಾವಿಗಾಗಿ ಹೊರ ರಾಜ್ಯದ ಕಾರ್ವಿುಕರಿಗೆ ಕಾಯುವ ಬದಲಾಗಿ ಟ್ರ್ಯಾಕ್ಟರ್ ಹೊಂದಿರುವ ರೈತರು ತಮ್ಮ ಗ್ರಾಮದಲ್ಲಿ ಎಂಟ್ಹತ್ತು ಕಾರ್ವಿುಕರೊಂದಿಗೆ ಕಬ್ಬು ಕಟಾವು ಮಾಡಿ, ಟಿ-ಕಾರ್ಟ್ ಮೂಲಕ ಪ್ರತಿದಿನ 15 ಟನ್ ವರೆಗೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಬಹುದಾಗಿದೆ. ಇದರಿಂದ ಗ್ರಾಮದಲ್ಲಿ ಕೂಲಿ ಕಾರ್ವಿುಕರಿಗೆ ಉದ್ಯೋಗ ಒದಗಿಸುವುದರ ಜತೆಗೆ ಸಾಗಾಣಿಕೆಯ ಬಾಡಿಗೆಯನ್ನೂ ಪಡೆಯಬಹುದಾಗಿದೆ. ನಮ್ಮ ಕಾರ್ಖಾನೆಯಿಂದ ಒಂದು ನೂರು ಟಿ-ಕಾರ್ಟ್​ಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದರು.

ಕಬ್ಬು ವಿಭಾಗದ ಮುಖ್ಯಸ್ಥ ಬಿ.ಬಿ. ಪಾಟೀಲ ಮಾತನಾಡಿ, ರೈತರಿಗೆ ಅನುಕೂಲವಾಗಲೆಂದು ಕಾರ್ಖಾನೆ ವತಿಯಿಂದ ಪ್ರತಿ ಎರಡು ಎಕರೆ ಕಬ್ಬು ಬೆಳೆ ಹೊಂದಿರುವ ರೈತರಿಗೆ ಬ್ಯಾಂಕ್ ಮೂಲಕ ಸಾಲ ಒದಗಿಸುವುದರ ಜತೆಗೆ, ಶೇ. 25 ಹಣವನ್ನು ಕಾರ್ಖಾನೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಒದಗಿಸಲಿದೆ. ಶಿಗ್ಗಾಂವಿ, ಸವಣೂರ, ಮುಂಡಗೋಡ ಮತ್ತು ಹಾನಗಲ್ಲ ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರೈತ ಮುಖಂಡ ಈರಣ್ಣ ಸಮಗೊಂಡ, ಮನೋಜ ನಾಯ್ಕ, ಅಶೋಕ ಗೊಂದಿ, ಎಸ್.ಕೆ. ಮಂಜುನಾಥ, ಬಿ.ಬಿ. ಪಾಟೀಲ ಸೇರಿದಂತೆ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net