ತಾಲೂಕಿನ ಸರ್ಕಾರಿ ಶಾಲೆಗಳನ್ನು ರಂಗಾಗಿಸಲು ಗುರಿ

17mlk3
Published on

ಮೇಲುಕೋಟೆ: ಸರ್ಕಾರಿ ಶಾಲೆ ಉಳಿಸಿ ಆಂದೋಲನ ರೂವಾರಿ ಅನು ಅಕ್ಕ ತಂಡ ಮೇಲುಕೋಟೆ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಬಣ್ಣದ ರಂಗು ನೀಡಿ ಆಕರ್ಷಣೆ ಹೆಚ್ಚಿಸಿದ ಕಾರ್ಯ ಇದೀಗ ಪಾಂಡವಪುರ ತಾಲೂಕಿನ ಎಲ್ಲ ಶಾಲೆಗಳಿಗೆ ಸುಣ್ಣ ಬಣ್ಣ ಕಾಣಲು ಪ್ರೇರಣೆಯಾಗಿದೆ.


ಪಾಂಡವಪುರ ತಾಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಅವರು ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಮ್ಮ ಶಾಲೆಗೆ ಆಗಸ್ಟ್ ಅಂತ್ಯದ ವೇಳೆಗೆ ಬಣ್ಣದ ರಂಗು ನೀಡಲು ಟಾಸ್ಕ್ ನೀಡಿದ್ದು, ಈ ಸಂಬಂಧ ಆದ ಪ್ರಗತಿಯನ್ನು ಕಚೇರಿಯ ಗಮನಕ್ಕೆ ತರಲು ಕೋರಿದ್ದಾರೆ.
ಜುಲೈ ಮೊದಲ ವಾರ ಅನು ಅಕ್ಕ ತಂಡವನ್ನು ಮೇಲುಕೋಟೆಗೆ ಆಹ್ವಾನಿಸಿ ದಾನಿಗಳ ಸಹಕಾರದಲ್ಲಿ ಪು.ತಿ.ನ. ವ್ಯಾಸಂಗ ಮಾಡಿದ ಹಿರಿಮೆಯಿರುವ ಶತಮಾನದ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ ಶಾಲೆಯ ಆಕರ್ಷಣೆ ಹೆಚ್ಚಿಸಿದ ಮುಖ್ಯ ಶಿಕ್ಷಕ ಎಸ್.ಎನ್.ಸಂತಾನರಾಮನ್ ಪರಿಶ್ರಮ ಮಾದರಿ ಎಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್, ಸರ್ಕಾರಿ ಶಾಲೆಗಳನ್ನು ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲವರ್ಧನೆ ಮಾಡುವಂತೆ ಎಲ್ಲ ಮುಖ್ಯ ಶಿಕ್ಷಕರನ್ನು ಪ್ರೇರೇಪಿಸಿದ್ದಾರೆ.


ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್, ಸರ್ಕಾರದ ನಿರ್ದೇಶನದಂತೆ ಹಿರಿಯ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗೆ ಬಣ್ಣಹೊಡೆಸುವ ಮತ್ತು ಆಕರ್ಷಣೆ ಹೆಚ್ಚಿಸುವ ಕಾರ್ಯವನ್ನು ಆಯಾಯ ಶಾಲೆಯ ಮುಖ್ಯಶಿಕ್ಷಕರು ಮಾಡಬೇಕು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪಣ ತೊಟ್ಟಿದ್ದು ಅವರ ಆಶಯಕ್ಕೆ ತಕ್ಕಂತೆ ತಾಲೂಕಿನ ಶೈಕ್ಷಣಿಕ ಪರಿಸರ ಆಕರ್ಷಣೀಯವಾಗಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದಿದ್ದಾರೆ. ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ಶಿಕ್ಷಣ ಸಂಯೋಜಕ ಶ್ರೀನಿವಾಸ್ ಇದ್ದರು.

ಶೈಕ್ಷಣಿಕ ವಲಯದಲ್ಲಿ ಹುರುಪು:ಬಿಇಒ ರವಿಕುಮಾರ್ ಸಲಹೆಯ ಬೆನ್ನಲ್ಲೇ ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಜಯರಾಂ ಹಾಗೂ ಮೇನಾಗರ ಶಾಲೆಯ ಮುಖ್ಯಶಿಕ್ಷಕ ಸೋಮಶೇಖರ್ ಶಾಲೆಗೆ ಬಣ್ಣ ಹೊಡೆಸುವ ಹಾಗೂ ಸುತ್ತ ತೆಂಗಿನ ಗಿಡಗಳನ್ನು ನೆಡುವ ಕಾರ್ಯ ಮಾಡಿದ್ದಾರೆ. ತಾಲೂಕಿನ ಹಲವಾರು ಶಾಲೆಗಳ ಮುಖ್ಯಶಿಕ್ಷಕರು ಬಣ್ಣ ಹೊಡೆಸಲು, ಪರಿಸರ ಅಭಿವೃದ್ಧಿಗೆ ಮುಂದಾಗಿರುವುದು ತಾಲೂಕಿನ ಶೈಕ್ಷಣಿಕ ವಲಯದಲ್ಲಿ ಹುರುಪು ಮೂಡಿಸಿದೆ.

ಗುರಿ ತಲುಪಲು ಪ್ರಗತಿ ಪರಿಶೀಲನೆ: ಮೇಲುಕೋಟೆ ಶಾಲೆಯ ಮುಖ್ಯಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಆಕರ್ಷಣೆ ನೀಡಿ ಮಾದರಿಯಾಗಿದ್ದಾರೆ. ತಾಲೂಕಿನ ಲಕ್ಷ್ಮೀಸಾಗರ ಹಾಗೂ ಮೇನಾಗರ ಮುಂತಾದ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರೂ ಶ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net