

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರ ಆಧಾರಿತವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1.5 ಲಕ್ಷ ಮತ ಕೊಡಿಸುವ ಗುರಿ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಮಾ.31ರಂದು ಸಂಜೆ 5ಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಈ ಹಿಂದೆ ಬೂತ್ ಗೆದ್ದರೆ ದೇಶ ಗೆದ್ದಂತೆ ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸುತ್ತಿದ್ದೇವು. ಆದರೆ ಇದೀಗ ಅದಕ್ಕಿಂತ ಮುಂದೆ ಸಾಗಿ ಪೇಜ್ ಗೆದ್ದರೆ ದೇಶ ಗೆಲ್ಲಲಿದೆ ಎಂದು ಚುನಾವಣೆಗೆ ಹೊರಟಿದ್ದೇವೆ. ಶಿವಮೊಗ್ಗ ನಗರದ ಏಳು ಸಾವಿರ ಪೇಜ್ ಪ್ರಮುಖರಿದ್ದು, ಸಭೆ ನಡೆಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಮೇ 7ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಚುನಾವಣೆಗೆ ಸರ್ವ ಸನ್ನದ್ಧವಾಗಿದೆ. ಪ್ರತಿ ಬೂತ್‌ನಲ್ಲಿ 13 ಜನರ ತಂಡ ರಚನೆ ಮಾಡಲಾಗಿದೆ. ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ ಒಳಗೊಂಡಂತೆ ಎಂಟು ವಿವಿಧ ಮೋರ್ಚಾಗಳನ್ನು ಬಲಪಡಿಸುವ ಕೆಲಸ ಆಗಿದೆ. ಒಂದು ಪೇಜ್‌ನಲ್ಲಿ 30 ಮತಗಳಿದ್ದು ಅವರನ್ನು ಪೇಜ್ ಪ್ರಮುಖರು ಸಂಪರ್ಕಿಸಲಿದ್ದಾರೆ ಎಂದರು.
ಈಶ್ವರಪ್ಪ ಅವರು ಎಂಎಲ್‌ಎ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಶಿವಮೊಗ್ಗ ನಗರದಲ್ಲಿ 1.04 ಲಕ್ಷ ಮತ ಪಡೆದಿದ್ದರು. ಎಂಟು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾನು 95 ಸಾವಿರ ಮತ ಪಡೆದಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಅವರು 1.10 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಬಾರಿ ಬಿಜೆಪಿಗೆ 1.5 ಲಕ್ಷ ಮತಗಳು ಬರಲಿದ್ದು ಅದಕ್ಕಾಗಿ 12 ಸಾವಿರ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದರು.
ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಚುನಾವಣಾ ಸಂಚಾಲಕ ಎಸ್.ಜ್ಞಾನೇಶ್ವರ, ಸಹ ಸಂಚಾಲಕ ಎನ್.ಜೆ.ನಾಗರಾಜ್, ಮಾಧ್ಯಮ ಪ್ರಮುಖ ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.