ಮುಕ್ತ ವಿವಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಗುರಿ

KSOU-14
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಗುರಿ ಹೊಂದಿದ್ದೇವೆ ಎಂದು ಎಂದು ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಹೇಳಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ 43,120 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಪ್ರತಿ ಜಿಲ್ಲೆಗಳಿಗೆ ತೆರಳಿ ಮುಕ್ತ ವಿವಿ ಕುರಿತು ಮಾಹಿತಿ ನೀಡುತ್ತಿರುವ ಪರಿಣಾಮ ಪ್ರತಿವರ್ಷ ದಾಖಲಾತಿ ಪ್ರಮಾಣ ಏರಿಕೆಯಾಗುತ್ತಿದೆ. ಉತ್ತರ ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ಪ್ರವೇಶಾತಿ ಪಡೆದ 43,120 ವಿದ್ಯಾರ್ಥಿಗಳ ಪೈಕಿ 25 ಸಾವಿರ ವಿದ್ಯಾರ್ಥಿ ಗಳು ಉತ್ತರ ಕರ್ನಾಟಕ ಭಾಗದವರು ಎಂಬುದು ವಿಶೇಷ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಜ.12 ರಿಂದ ಮಾ.31ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಯಲ್ಲಿ 64 ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇದ್ದು, ಈ ಪೈಕಿ 44 ಆಫ್‌ಲೈನ್, 10 ಆನ್‌ಲೈನ್ ಕೋರ್ಸ್‌ಗಳಾಗಿವೆ. ವಿವಿಯು ನ್ಯಾಕ್ ಎಪ್ಲಸ್ ಮಾನ್ಯತೆಯನ್ನು ಪಡೆದಿದೆ. ವಿವಿಯಲ್ಲಿ ಹೊಸದಾಗಿ ಎಂಎಸ್‌ಡಬ್ಲುೃ, ಎಂಸಿಎ ಕೋರ್ಸ್‌ಗಳು ಪ್ರಾರಂಭಗೊಂಡಿವೆ. ಇದರ ಜತೆಗೆ ಅರ್ಥ್‌ಸೈನ್ಸ್ ಕೋರ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲು ಯುಜಿಸಿ ತಂಡ ಜ.17 ರಂದು ಮುಕ್ತ ವಿವಿಗೆ ಆಗಮಿಸಲಿದೆ. ಜರ್ಮನ್, ಫ್ರೆಂಚ್ ಸೇರಿದಂತೆ ವಿವಿಧ ವಿದೇಶಿ ಭಾಷೆಗಳ ಕಲಿಕಾ ಕೋರ್ಸ್‌ಗಳನ್ನು ದೆಹಲಿಯ ಜವಹರ್‌ಲಾಲ್ ನೆಹರು ವಿಶ್ವ ವಿದ್ಯಾಲಯ ಸಹಯೋಗದೊಂದಿಗೆ ಪ್ರಾರಂಭಿಸಲು ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ದೂರ ಶಿಕ್ಷಣ ನೀಡುತ್ತಿರುವ ಏಕೈಕ ವಿಶ್ವ ವಿದ್ಯಾಲಯ ಇದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ವಿದ್ಯಾರ್ಥಿ ಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಕೈಗೆಟುಕಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ರೀಜನಲ್ ಸೆಂಟರ್ ತೆರೆಯಲಾಗಿದೆ. ಅಲ್ಲದೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸ್ಟಡಿ ಸೆಂಟರ್ ತೆರೆಯಲು ಉದ್ದೇಶಿಸಲಾಗಿದೆ. ಕೆಲವೊಂದು ರೀಜಲ್ ಸೆಂಟರ್‌ಗಳು ಸ್ವಂತ ಕಟ್ಟಡ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ನಮಗೆ ಜಾಗ ದೊರೆತ್ತಿದೆ ಎಂದರು.

ಪಿಎಚ್‌ಡಿ ಕೋರ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳ ಒಳಗೆ ನೋಟಿಫಿಕೇಷನ್ ಹೊರಡಿಸಲಾಗುವುದು. 22 ಪ್ರಾಧ್ಯಾಪಕರಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡುವ ಅನುಮತಿ ದೊರೆತ್ತಿದ್ದು, ಪ್ರತಿ ಪ್ರಾಧ್ಯಾಪಕರು 4 ರಿಂದ 5 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಒಟ್ಟು ನೂರು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಕೋರ್ಸ್‌ಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಮುಕ್ತ ವಿವಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ 12 ಜನವರಿ 2024 ರಿಂದ ರಿಂದ 3 ಜನವರಿ 2025ರವರೆಗೆ ಆಕಾಶವಾಣಿಯಲ್ಲಿ ಪ್ರತಿ ಶುಕ್ರವಾರ ಬೆಳಗ್ಗೆ 6.40 ರಿಂದ 6.50 ಬಾನುಲಿ ಸರಣಿ ಕಾರ್ಯಕ್ರಮ ಬಿತ್ತರಗೊಳ್ಳ ಲಿದ್ದು, ಅದೇ ದಿನ ಸಂಜೆ 5.45 ರಿಂದ 5.55ರವರೆಗೆ ಬಾನುಲಿ ಸರಣಿ ಮರು ಪ್ರಸಾರಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ, ಅಕಾಡೆಮಿಕ್ ಡೀನ್ ಪ್ರೊ.ಎನ್.ಲಕ್ಷ್ಮೀ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net