ಗುರಿ-ಛಲವಿದ್ದರೆ ಉನ್ನತ ಸ್ಥಾನ ಸಾಧ್ಯ

23SND-01
Published on

ಸಿಂಧನೂರು: ನಾವು ಗಳಿಸಿದ ಆಸ್ತಿ, ಸಂಪತ್ತು ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ಆದರೆ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಚೀಕಲಪರ್ವಿ ಶ್ರೀ ರುದ್ರಮುನೇಶ್ವರ ಮಠದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹೇಳಿದರು.

ತಿಡಿಗೋಳ ಸರ್ಕಾರಿ ಪ್ರೌಢಶಾಲೆಯಲ್ಲಿ 1999-2000 ನೇ ಸಾಲಿನ ಹಳೆಯ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ್ದ ಗುರುವಂದನಾ, ಪ್ರೌಢಶಾಲೆಯ ರಜತ ಮಹೋತ್ಸವ, ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ನಾವು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದಕ್ಕೆ ಗುರುವಿನ ಕೃಪೆ ಹೆಚ್ಚಿರುತ್ತದೆ. ನಾವು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದಾಗಿದೆ. ಈ ಸಮಾಜದಿಂದ ಪಡೆದಿರುವ ಪೈಕಿ ಕೆಲ ಪಾಲನ್ನು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಈ ಮೂಲಕ ಅಕ್ಷರ ಕಲಿಸಿದ ಗುರುಗಳು, ಹೆತ್ತವರು, ಜಮೀನಿನ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.

ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಮಾತನಾಡಿ, ನಾನು 1994-95 ರಲ್ಲಿ ಇಲ್ಲಿಗೆ ಬಂದಾಗ ಸ್ಥಳೀಯರ ಸಹಕಾರದಿಂದ 15 ವಿದ್ಯಾರ್ಥಿಗಳಿಂದ ಆರಂಭವಾದ ಪ್ರೌಢಶಾಲೆಯಲ್ಲಿ ನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಇಲ್ಲಿನ ಅನುಭವ ನಾನು ದೊಡ್ಡ ಸ್ಥಾನದಲ್ಲಿರಲು ಪ್ರೇರಣೆಯಾಯಿತು. ಯಾವುದೂ ಸರಳವಾಗಿ ಸಿಗಬಾರದು. ಶ್ರಮಪಟ್ಟ ಮೇಲೆ ಸಿಗಬೇಕೆಂಬುದಕ್ಕೆ ನಾನೇ ಉದಾಹರಣೆಯಾಗಿರುವೆ. ಇಲ್ಲಿ ಕಲಿತ ಸಾಕಷ್ಟ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ನನ್ನ ಭಾಗ್ಯ ಎಂದರು.

ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಪಿ.ದಿನೇಶ ಅಧ್ಯಕ್ಷತೆ ವಹಿಸಿದ್ದರು. ಚನ್ನಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಹಜರತ್ ಬಾಗಲಿ, ಜವಳಗೇರಾ ಸರ್ಕಾರಿ ಕಾಲೇಜ್ ಉಪನ್ಯಾಸಕ ವೈ.ಶಂಕರಪ್ಪ, ತಾಲೂಕು ಕ್ರೀಡಾಧಿಕಾರಿ ಜಿ.ಎಂ.ಗದ್ದೆಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕಿ ವಿ.ಜೆ. ಸುಜಾತ, ಮುಕ್ಕುಂದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಹೊಳೆಯಪ್ಪ ನಾಗಲಾಪುರ, ಗಜೇಂದ್ರಗಡ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಝಾಕೀರ್ ಹುಸೇನ, ಮುರುಗಯ್ಯ ಹಿರೇಮಠ, ಆರ್.ಅಂಬಿಕಾ, ಅಮರೇಗೌಡ ಗದ್ರಟಗಿ, ಶಂಬನಗೌಡ ಕವಿತಾಳ, ದೊಡ್ಡಬಸಪ್ಪ ಕಾಸರಡ್ಡಿ, ಹಿರೇಶರಣಪ್ಪ ಕಾಸರಡ್ಡಿ, ಶಿವಪುತ್ರಯ್ಯಸ್ವಾಮಿ ಹಿರೇಮಠ, ಆದನಗೌಡ ಗುಡದೂರು, ಶೇಖರಪ್ಪ ಕೇಮರಡ್ಡಿ, ಕರಿಬಸಪ್ಪ ಕಾಸರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net