ಉನ್ನತ ಗುರಿ ಹಾಕಿಕೊಂಡು ಓದಿ

blg 3-1
ಚಿಕ್ಕಾಲಗುಂಡಿ ಗ್ರಾಮದ ಸಿದ್ಧಾರೂಡ ಮಠದಲ್ಲಿ ಆಯೋಜಿಸಿದ್ದ ಸಕಾರಾತ್ಮಕ ಚಿಂತನೆ ಮೂಲಕ ಸರಳ ಕಲಿಕೆ ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ಉದ್ಘಾಟಿಸಿದರು. ಜಗದೀಶ ಖೋತ, ರವಿಸಂಜಯ ಸಾವಳಗಿಮಠ, ಅಶ್ವಿನಿ ನಾಯಕ ಇತರರಿದ್ದಾರೆ.
Published on

ಬೀಳಗಿ: ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರೆಡೆಗೆ ಮನಸ್ಸನ್ನು ಕೇಂದ್ರೀಕರಿಸಿ ಅಭ್ಯಾಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ಹೇಳಿದರು.

ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಸಿದ್ಧಾರೂಡ ಮಠದಲ್ಲಿ ಮಂಗಳೂರು ಯುನಿವರ್ಸಲ್ ನಾಲೇಜ್ ಟ್ರಸ್ಟ್ ಹಾಗೂ ಧಾರವಾಡ ಗ್ರಾಮ ವಿಕಾಸ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಕಾರಾತ್ಮಕ ಚಿಂತನೆ ಮೂಲಕ ಸರಳ ಕಲಿಕೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಸವಾಲುಗಳನ್ನು ಎದುರಿಸಿ ತಂದೆ, ತಾಯಿ ಹಾಗೂ ಗುರುಗಳಿಗೆ ಕೀರ್ತಿ ತರಬೇಕು ಎಂದರು.

ಬಾಗಲಕೋಟೆ ಬಿವಿವಿ ಸಂಘದ ಸದಸ್ಯ ರವಿಸಂಜಯ ಸಾವಳಗಿಮಠ ಮಾತನಾಡಿ, ಸಂಸ್ಕಾರ ಇಲ್ಲದ ಶಿಕ್ಷಣ ಎಷ್ಟು ಪಡೆದರೂ ವ್ಯರ್ಥ. ಭಾರತೀಯ ಸಂಸ್ಕಾರ, ಸಂಸ್ಕೃತಿಯ ಜತೆಗೆ ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಧಾರವಾಡ ಗ್ರಾಮ ವಿಕಾಸ ಸಂಸ್ಥೆಯ ಸಂಸ್ಥಾಪಕಿ ಅಶ್ವಿನಿ ನಾಯಕ ಮಕ್ಕಳಿಗೆ ಧನಾತ್ಮಕ ಚಿಂತನೆ, ಜ್ಞಾಪಕ ಶಕ್ತಿ, ಮಿದುಳಿನ ಸಾಮರ್ಥ್ಯ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು.

ಮುಖ್ಯೋಪಾಧ್ಯಾಯ ಎಸ್.ಸಿ.ಕರಿಸೈಯಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ, ಶಿಕ್ಷಣ ಸಂಯೋಜಕ ಜಗದೀಶ ಖೋತ, ಸೋಮಶೇಖರ ತಳೇವಾಡ, ವೈ.ಎಸ್. ರೂಗಿ, ಎಸ್.ಎಚ್. ನಾಯಕ, ಆರ್.ವಿ. ಕಟ್ಟಿ ಮತ್ತಿತರರಿದ್ದರು.

ಚಂದ್ರಶೇಖರ ಪರಸಗೊಂಡ ಸ್ವಾಗತಿಸಿದರು, ಶಿಕ್ಷಕ ರವಿಶಂಕರ ನಿರೂಪಿಸಿದರು ಹಾಗೂ ದಾನಮ್ಮ ನಾಯನೇಗಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net