

ಮಂಗಳೂರು: ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ಒದಗಿಸಲು ಪೂರಕ ಕಾರ್ಯಕ್ರಮ ರೂಪಿಸುವುದು ಪೋಷಣ ಅಭಿಯಾನದ ಗುರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ. ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ರಾಷ್ಟ್ರೀಯ ಪೋಷಣ ಅಭಿಯಾನ ಮತ್ತು ರೈತರ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ಶಂಕರಿ, ಶಾಲಿನಿ, ಸೀತಾ, ಇಪ್ಕೊ ಸಂಸ್ಥೆಯ ಕ್ಷೇತ್ರ ಅಧಿಕಾರಿ ಸಂಗಮೇಶ್, ಭಾರತೀಯ ವಿಕಾಸ ಟ್ರಸ್ಟ್ ಯೋಜನಾಧಿಕಾರಿ ಜೀವನ್ ಉಪಸ್ಥಿತರಿದ್ದರು.
ಮಣಿಪಾಲ ಕೆಎಂಸಿಯ ಪಥ್ಯಾಹಾರ ತಜ್ಞೆ ಜೋನಿಯಾ ಗಲ್ಬಾವೊ, ಡಾ.ಚೇತನ್ ಮತ್ತು ಡಾ.ರಶ್ಮಿ ಉಪನ್ಯಾಸ ನೀಡಿದರು. ಬಳಿಕ ಅಂಗನವಾಡಿ ಸಹಾಯಕಿಯರಿಗೆ ತರಕಾರಿ ಬೀಜ ವಿತರಿಸಲಾಯಿತು.
ಕೇಂದ್ರದ ಮೀನುಗಾರಿಕೆ ವಿಜ್ಞಾನಿ ಡಾ.ಚೇತನ್ ಎನ್. ಸ್ವಾಗತಿಸಿದರು. ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ ಪ್ರಾಸ್ತಾವನೆಗೈದರು. ಬೇಸಾಯಶಾಸ ವಿಭಾಗ ವಿಜ್ಞಾನಿ ಡಾ.ನವೀನ್ ಕುಮಾರ್ ಬಿ.ಟಿ. ವಂದಿಸಿದರು. ತೋಟಗಾರಿಕೆ ವಿಭಾಗದ ವಿಜ್ಞಾನಿ ಡಾ.ರಶ್ಮಿ ಆರ್. ಕಾರ್ಯಕ್ರಮ ನಿರೂಪಿಸಿದರು.