

ಹನುಮಸಾಗರ: ವಿದ್ಯಾರ್ಥಿಗಳು ಭಾರತೀಯ ಸೈನ್ಯಕ್ಕೆ ಸೇರಲು ಈಗಿನಿಂದಲೇ ಸೂಕ್ತ ತಯಾರಿ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ ಹೇಳಿದರು.
ಸಮೀಪದ ಕುರಬಗೇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ಅಗ್ನಿಪಥ ಯೋಜನೆಯಡಿ ಭಾರತೀಯ ಸೈನ್ಯದಲ್ಲಿ ಸೇವೆ ಮಾಡುತ್ತಿರುವ ಮಹಾಂತೇಶ ಹೂಗಾರ, ಮಂಜುನಾಥ ನೇಕಾರ ಅವರನ್ನು ಸನ್ಮಾನಿಸಿ ಶುಕ್ರವಾರ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ದೇಶ ಅಭಿಮಾನ ಇರಬೇಕು. ಕಲಿಯುವ ಸಮಯದಲ್ಲಿ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದರು. ಎಸ್ಡಿಎಂಸಿ ಸದಸ್ಯ ಮಾರುತಿ ಹಡಪದ, ಶಿಕ್ಷಕರಾದ ಭರಮಪ್ಪ ಕಂಡೇಕಾರ, ಸಣ್ಣಪ್ಪ ಹಡಪದ ಇತರರಿದ್ದರು.