

ಧಾರವಾಡ: ನರೇಗಾ ಕೂಲಿ ಕಾರ್ಮಿಕರ ಬಾಕಿ ಹಣ ಬಿಡುಗಡೆ, ಬರಗಾಲ ಘೋಷಣೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ಧಾರವಾಡ ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕಲಾಭವನದಿಂದ ಜಿಲ್ಲಾಽಕಾರಿ ಕಚೇರಿ, ಅಲ್ಲಿಂದ ಜಿಲ್ಲಾ ಪಂಚಾಯಿತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಇಒ ಸ್ವರೂಪಾ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ರಾಜ್ಯದಲ್ಲಿ ಮುಂಗಾರು ತಡವಾಗಿ ಪ್ರವೇಶ ಮಾಡಿತು. ಅಲ್ಲದೆ, ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದರೂ ಮಳೆಯಿಲ್ಲದೆ ಬೆಳೆ ನಷ್ಟವಾಗಿದೆ. ಮುಂಗಾರು ಮಳೆ ವೈಫಲ್ಯದಿಂದ ೨೦೨೨- ೨೩ರಲ್ಲಿ ೭೬ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟೆಲ್ಲ ಆದರೂ ಸರ್ಕಾರ ಬರಗಾಲ ಘೋಷಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ದುಡಿದ ಹಣವು ಕೈ ಸೇರುತ್ತಿಲ್ಲ. ದಿನಗೂಲಿ ಮೇಲೆ ಜೀವನ ಮಾಡುವ ಕೋಟ್ಯಂತರ ನರೇಗಾ ಕೂಲಿ ಕಾರ್ಮಿಕರ ಬದುಕು ದುರ್ಬರವಾಗಿದೆ. ಕೆಲವೆಡೆ ೨ ತಿಂಗಳ ಹಣ ಬಾಕಿ ಇದ್ದು, ಅಗತ್ಯ ಇದ್ದವರಿಗೆ ಕೆಲಸ ನೀಡುತ್ತಿಲ್ಲ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ಹನುಮೇಶ ಹುಡೇದ, ಮಾರುತಿ ಪೂಜಾರ, ಮುತ್ತು ಇಂಚಲ, ಜಗದೀಶ ಪೂಜಾರ, ಬಸಪ್ಪ ದರೋಜಿ, ಮಂಜು ಬೆಣ್ಣಿ, ಫಕ್ಕೀರಪ್ಪ ಬಾಗೋಡಿ, ರಸೂಲ ಜಮಾದಾರ, ನಾರಾಯಣ ಮೇಗಾಣಿ, ಈರಪ್ಪ ಅಂಗಡಿ, ಇತರರಿದ್ದರು.