

ಮೈಸೂರು: ವಿಶ್ವದಲ್ಲಿ ಪ್ರಸ್ತುತ 822 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದು, ಆಹಾರವನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್ ಹೇಳಿದರು.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್) ಸಭಾಂಗಣದಲ್ಲಿ ಡಾ.ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿ ‘ಆಹಾರ ಸಂಸ್ಕೃತಿ, ಆರೋಗ್ಯ ಮತ್ತು ಪರಿಸರ ಹಾಗೂ ಸುಸ್ಥಿರ ಸ್ವಾಸ್ಥೃ ಇವುಗಳ ನಡುವಣ ಸಮನ್ವಯ ಸಂಬಂಧ’ ವಿಷಯದ ಕುರಿತು ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಅರೋಗ್ಯಕ್ಕೆ ಆಹಾರದ ಅವಶ್ಯಕತೆ ಇದೆ. ಅದೇ ರೀತಿ ನಮ್ಮ ಸುತ್ತಮುತ್ತಲಿನ ವಾತಾವರಣ ಸಹ ಆರೋಗ್ಯವಾಗಿರಬೇಕು. ಹಾಗಾಗಿ ಜನರಿಗೆ ಆಹಾರ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಸಾಮೂಹಿಕ ಪ್ರಯತ್ನದ ಅವಶ್ಯಕತೆ ಇದೆ. ದೇಶದಲ್ಲಿ 6 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರವಣದೋಷವುಳ್ಳ ಮೂವರು ಮಕ್ಕಳಿಗೆ ಶ್ರವಣ ಯಂತ್ರ ನೀಡಲಾಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ, ಡಾ.ವಿಜಯಲಕ್ಷ್ಮಿ ಬಸವರಾಜ್ ಅವರ ಮಕ್ಕಳಾದ ಸವಿ, ಡಾ.ಪವನ್ ಕುಮಾರ್ ಇದ್ದರು.