ರಾಯಚೂರಲ್ಲಿ ಏಮ್ಸ್ ಸ್ಥಾಪಿಸಲು ಕ್ರಮಕೈಗೊಳ್ಳಿ

25LNG01
Published on

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಅತಿ ಹಿಂದುಳಿದ ಜಿಲ್ಲೆ ರಾಯಚೂರಿನಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಆರೋಗ್ಯ ಸಂಸ್ಥೆ (ಏಮ್ಸ್) ಸ್ಥಾಪಿಸಬೇಕೆಂದು ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಸುತ್ತಿರುವ ಹೋರಾಟ 501 ದಿನ ಪೂರೈಸಿದ ಪ್ರಯುಕ್ತ ಹೋರಾಟ ಸಮಿತಿ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ 2020 ರಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಭರವಸೆಗಳು ಹುಸಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದೆ ಏಮ್ಸ್ ಸ್ಥಾಪಿಸದೆ ವಂಚಿಸಲಾಗುತ್ತಿದೆ. ರಾಯಚೂರಿನಲ್ಲಿ 500 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಲ್ಲೆಗೆ ಲಭಿಸಬೇಕಿದ್ದ ಐಐಟಿ ಕೂಡ ಅಂದಿನ ಸರ್ಕಾರಗಳ ತಾರತಮ್ಯ ಧೋರಣೆಯಿಂದ ಕೈ ತಪ್ಪಿ ಹೋಯಿತು. ಏಮ್ಸ್ ಸ್ಥಾಪಿಸುವ ಭರವಸೆ ಕೂಡ ಹುಸಿಯಾಗತೊಡಗಿದೆ. ರಾಜ್ಯ ಸರ್ಕಾರ ಮತ್ತು ಈ ಭಾಗದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಈ ಭಾಗದ ವಿದ್ಯಾರ್ಥಿಗಳು ಪ್ರಗತಿ ಸಾಧಿಸಲು ಏಮ್ಸ್ ಮಂಜೂರು ಮಾಡಿಸುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಿಸಲು ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಪ್ರಮುಖರಾದ ಮಹೇಶ ಶಾಸ್ತ್ರಿ, ಅಮರೇಶ ವೆಂಕಟಾಪುರ, ಸಿದ್ಧರಾಮಪ್ಪ ಕಾಡ್ಲೂರು, ಶರಣಬಸವ ಪಟ್ಟಣಶೆಟ್ಟಿ ವಕೀಲ, ಅಂಬಿಕಾ ವಟಗಲ್, ತಿಮ್ಮಾರಡ್ಡಿ, ಮಾದೇಶ ಸರ್ಜಾಪುರ, ನಾನಾ ಕ್ಷೇತ್ರದ ಪ್ರಮುಖರು, ನರ್ಸಿಂಗ್ ಮತ್ತು ಜಿಟಿಟಿಸಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net