ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿಯ ಮಹಿಳಾ ಸಿಬ್ಬಂದಿಯೊಬ್ಬರು ಸುಮಾರು 16 ಲಕ್ಷ ರೂ. ಹಣವನ್ನು ದುರುಪಯೋಗ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಡಿಒ ಹಾಗೂ ಆಡಳಿತ ಮಂಡಳಿಯ ಕೆಲವರು ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
15 ದಿನಗಳ ಒಳಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಯಡವಾರೆ ಗ್ರಾಮದ ಮಚ್ಚಂಡ ಅಶೋಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಸರಿತಾ ಎಂಬಾಕೆ ಹಣವನ್ನು ತನ್ನ ವೈಯಕ್ತಿಕ ಖಾತೆಗೆ ಜಮೆ ಮಾಡಿರುವುದು ಲೆಕ್ಕ ಪರಿಶೋಧನೆ ಸಂದರ್ಭ ಬಯಲಾಗಿದೆ. ಪ್ರತಿಯೊಂದು ಬಿಲ್ ಪಾವತಿಯಾಗಲು ಪಿಡಿಒ ಮತ್ತು ಅಧ್ಯಕ್ಷರು ಥಂಬ್ ಕೊಡಬೇಕಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಶಾಸಕರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಿಡಿಒ ಮತ್ತು ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಟ್ಟು ದಾಖಲೆಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಳ್ಳಬೇಕು. ವಿಳಂಬವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ದೂರಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಸೂಕ್ತ ತನಿಖೆ ನಡೆಯದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು. ಕಳೆದ 15 ವರ್ಷಗಳಿಂದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಅರೋಪಿಸಿದರು.
ಗರಗಂದೂರು ಗ್ರಾಮದ ಲಕ್ಷ್ಮಣ, ಯಡವಾರೆ ಲವಕುಮಾರ್, ಐಗೂರು ಗ್ರಾಮದ ಎಂ.ಪಿ.ಧರ್ಮಪ್ಪ, ಕೆ.ಪಿ.ಸುಬ್ಬಯ್ಯ ಇದ್ದರು.