ರೈಲ್ವೆ ಸೌಲಭ್ಯಗಳ ಬಲವರ್ಧನೆಗೆ ಎಐಡಿವೈಒ ಆಗ್ರಹ

RAILWE FECILITES AIDYO
ವಿಜಯಪುರ ರೈಲ್ವೆ ಅಧಿಕಾರಿಗೆ ಎಐಡಿವೈಒ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಿದ್ದಲಿಂಗ ಬಾಗೇವಾಡಿ, ಗೌಡಪ್ಪ ಬಿರಾದಾರ, ಮಹಾದೇವಪ್ಪ ದೇವಲಿ ಮತ್ತಿತರರಿದ್ದಾರೆ.
Published on

ವಿಜಯಪುರ: ರೈಲ್ವೆ ಸೌಲಭ್ಯಗಳ ಸಮಗ್ರ ಬಲವರ್ಧನೆ ಮತ್ತು ಅಭಿವೃದ್ಧಿಗೆ ಆಗ್ರಹಿಸಿ ಎಐಡಿವೈಒ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್) ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಬಳಿಕ ರೈಲ್ವೆ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆಯು ಕ್ರಮೇಣ ದುರ್ಬಲಗೊಳ್ಳುತ್ತಿದೆ. ದಶಕಗಳಿಂದ ಭಾರತೀಯ ರೈಲ್ವೆಯನ್ನು ಜನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ಕಟ್ಟಿ ಬೆಳೆಸಿ, ಪ್ರತೀ ಬಜೆಟ್‌ನಲ್ಲಿಯೂ ವಿಸ್ತರಿಸುತ್ತಾ ಬರಲಾಗಿತ್ತು. ಆದರೀಗ ಕ್ರಮೇಣವಾಗಿ ದುರ್ಬಲಗೊಳಿಸಲಾಗುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ದೂರ ಯಾನದ ರೈಲುಗಳಲ್ಲಿನ ಪ್ರಯಾಣವು ದುಸ್ಸಾಧ್ಯವಾಗಿದೆ ಮತ್ತು ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ಎಂಬುದು ತೀವ್ರ ಆತಂಕಕಾರಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ ಎಂದರು.

ಸಿಬ್ಬಂದಿ ಕೊರತೆ

ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್- 1 ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023ರ ಅಂಕಿ ಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. ಶುಚಿತ್ವ, ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ. ಇನ್ನೂ ಲೋಕೋ ಪೈಲಟ್‌ಗಳ ಕೊರತೆಯೂ ಇದೆ. 2019ರಿಂದ 2023ರವರೆಗೆ ಒಟ್ಟು 162 ರೈಲು ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 118 ಹಳಿ ತಪ್ಪುವಿಕೆಗಳು ಮತ್ತು ಹದಿನಾರು ಒಂದಕ್ಕೊಂದು ಡಿಕ್ಕಿ ಅಪಘಾತಗಳು ಸೇರಿವೆ. ಖಾಲಿ ಹುದ್ದೆಗಳು ಭರ್ತಿಯಾಗದಿರುವುದರಿಂದಲೇ 2ನೇ ಜೂನ್ 2023ರ ಬಾಲಸೋರ್, ಒರಿಸ್ಸಾದಲ್ಲಿ ಆದಂತಹ ಅಪಘಾತಗಳು ಸಂಭವಿಸಿವೆ. ಇದು ಈ ಶತಮಾನದಲ್ಲೇ ನಡೆದ ಅತ್ಯಂತ ಭೀಕರ ದುರಂತವಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ಮಾತನಾಡಿ, ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ತತ್ಪರಿಣಾಮ ಪ್ರತಿ ರೈಲುಗಳೂ ಜನದಟ್ಟಣೆಯಿಂದ ಓಡುತ್ತಿವೆ. ಇದರ ನಿವಾರಣೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ಪದಾಧಿಕಾರಿಗಳಾದ ಗೌಡಪ್ಪ ಬಿರಾದಾರ, ಮಹಾದೇವಪ್ಪ ದೇವಲಿ, ಗಿರೀಶ ಆಸಂಗಿ, ಮಾಬುಸುಬಾನಿ ಬೀಳಗಿ, ಪ್ರದೀಪ ಖಾನಾಪುರ, ರಾಜಕುಮಾರ ಬಿರಾದಾರ, ಆಕಾಶ ಬಾಗೊಂಡ, ಗೋವಿಂದ ನಾವಿ, ಆಕಾಶ ಮಡಿಗ್ಯಾಳ, ಜೆ.ಎಸ್. ಬಾವಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net