ಕಾಡಂಚಿನ ಗ್ರಾಮಗಳಿಗೆ ಬಸ್ ಗಾಗಿ ಎಐಡಿವೈಒ ಕಾರ್ಯಕರ್ತರ ಪ್ರತಿಭಟನೆ

11
Published on

ಮೈಸೂರು: ಕಾಡಂಚಿನ ಗ್ರಾಮಗಳು ಹಾಗೂ ಆದಿವಾಸಿ ಹಾಡಿಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಬನ್ನಿಮಂಟಪದ ಎಲ್‌ಐಸಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗೀಯ ಕಚೇರಿವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಚೇರಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಹಾಗೂ ಹಾಡಿಗಳಿಗೆ ಬಸ್ ಸೌಲಭ್ಯ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ನಾಗನಹಳ್ಳಿ ಮಾರ್ಗವಾಗಿ ತಾರಕ ಗ್ರಾಮದವರೆಗೆ ಬೆಳಗ್ಗೆ 7.30 ಸಂಜೆ 5.30 ಮತ್ತು ರಾತ್ರಿ 8 ಗಂಟೆಗೆ ಬಸ್ ಸಂಚಾರಕ್ಕಾಗಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳು ಹಾಗೂ ಆದಿವಾಸಿ ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ನಿತ್ಯವೂ ನೂರಾರು ಜನ ಪ್ರಯಾಣಿಸುತ್ತಾರೆ. ಆದರೆ, ಬೆಳಗ್ಗೆ ಹಾಗೂ ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುವುದರಿಂದ ಜನರು ಆತಂಕದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ಇದೆ ಎಂದರು.

ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ, ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಗ್ಗೆಯಿಂದ ರಾತ್ರಿ 8 ಗಂಟೆವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿ ಚೇತನ್ ಅವರಿಗೆ ಮನವಿ ಸಲ್ಲಿಸಿದರು.

ಎಐಡಿವೈಒ ಅಧ್ಯಕ್ಷ ಟಿ.ಆರ್.ಸುನೀಲ್, ಜಿಲ್ಲಾ ಕಾರ್ಯದರ್ಶಿ ಸುಮಾ, ಮುಖಂಡರಾದ ಸಿಂಚನಾ, ಹಿರೇಹಳ್ಳಿ ಪುಟ್ಟೇಗೌಡ, ರಂಗರಾಜು ಸ್ವಾಮಿಗೌಡ, ಕೃಷ್ಣೇಗೌಡ, ಯಜಮಾನ ಮಂಜು, ಹಿರೇಹಳ್ಳಿ ಎ.ವೆಂಕಟಸ್ವಾಮಿ, ಶಂಭುಗೌಡ, ಉದಯ, ಅಂಬಿಕಾ, ಲಕ್ಷ್ಮಮ್ಮ , ಜಯಮ್ಮ, ಮಲ್ಲಿಗಮ್ಮ, ಸುಧಾ, ಪುಟ್ಟಮ್ಮ, ಪದಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net