ಮೈಸೂರಿನಲ್ಲಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪನ ದಿನ ಆಚರಣೆ

aidso
Published on

ಮೈಸೂರು: ನಮ್ಮ ಸಮಾಜವು ಇಂದು ಅತ್ಯಂತ ತೀವ್ರ ಸಾಂಸ್ಕೃತಿಕ ಬಿಕಟ್ಟು ಎದುರಿಸುತ್ತಿದ್ದು, ನೈತಿಕಮೌಲ್ಯ ಕುಸಿದಿದೆ. ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ಇವೆಲ್ಲವೂ ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರುತ್ತಿದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ್ ಕಳವಳ ವ್ಯಕ್ತಪಡಿಸಿದರು.

ನಗರದ ಎಐಡಿಎಸ್‌ಒ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ 70ನೇ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಅಧಃಪತನದ ವಿರುದ್ಧ ಸಮರ ಸಾರಿ ಇದಕ್ಕೆ ಪರ್ಯಾಯವಾಗಿ ನೇತಾಜಿ ಸುಭಾಷ್‌ಚಂದ್ರಬೋಸ್ ಹಾಗೂ ಭಗತ್‌ಸಿಂಗ್ ಅವರಂತಹ ಸ್ವಾತಂತ್ರೃ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಎಲ್ಲೆಡೆ ಹರಡುತ್ತಿದೆ ಎಂದರು.

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ಕಳೆದ 70 ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಉಳಿಸಲು ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಲು ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಹೋರಾಟದಿಂದ ಹಲವಾರು ನ್ಯಾಯಯುತ ಬೇಡಿಕೆಗಳು ಈಡೇರಿದೆ ಎಂದರು.

ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮ್ಯವಿಲ್ಲದೆ ಪ್ರಜಾತಾಂತ್ರಿಕ, ವೈಜ್ಞಾನಿಕ, ಧರ್ಮನಿರಪೇಕ್ಷ ಶಿಕ್ಷಣವು ದೊರೆಯಬೇಕು ಎಂಬ ಧ್ಯೇಯದೊಂದಿಗೆ ಎಐಡಿಎಸ್‌ಒ ಹೋರಾಟ ನಡೆಸುತ್ತಿದೆ. ಸಂಘಟನೆಯ ಕರೆಗೆ ಓಗೊಟ್ಟು ಲಕ್ಷಾಂತರ ವಿದ್ಯಾರ್ಥಿಗಳು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇತಿಹಾಸದ ಉದ್ದಗಲಕ್ಕೂ ಸಮಾಜದ ಬದಲಾವಣೆಗಾಗಿ, ಜ್ಞಾನಕ್ಕಾಗಿ, ಸತ್ಯಕ್ಕಾಗಿ ಮಹಾನ್ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಮನಸಾಕ್ಷಿ ಜಾಗೃತಗೊಳಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ಶಿಕ್ಷಣ, ಮಾನವತೆ, ಸಂಸ್ಕೃತಿ ಉಳಿಸಲು ಮತ್ತು ಶಿಕ್ಷಣದ ವ್ಯಾಪಾರಿಕರಣ, ಹಸಿವು, ಬಡತನ, ನಿರುದ್ಯೋಗ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮ, ಚಂದ್ರಿಕಾ, ಚಂದನ, ದಿಶಾ, ಅಭಿಷೇಕ್, ಅಂಜಲಿ, ನಂದೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net