ಸರ್ಕಾರಿ ಶಾಲೆ ಕೊಠಡಿ ದುರಸ್ತಿಗೆ ಎಐಡಿಎಸ್‌ಒನಿಂದ ಸಹಿ ಸಂಗ್ರಹ

7
Published on

ಮೈಸೂರು: ರಾಜ್ಯದಲ್ಲಿ ಶಿಥಿಲಗೊಂಡಿರುವ 21 ಸಾವಿರ ಸರ್ಕಾರಿ ಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒನಿಂದ ನಗರದಲ್ಲಿ ಮಾನಸಗಂಗೋತ್ರಿಯಲ್ಲಿ ಬುಧವಾರ ಸಹಿ ಸಂಗ್ರಹಿಸಲಾಯಿತು.

ಎಐಡಿಎಸ್‌ಒ ಮೈಸೂರು ವಿಶ್ವವಿದ್ಯಾನಿಲಯ ಘಟಕದ ಸಂಚಾಲಕಿ ಸ್ವಾತಿ, ರಾಜ್ಯದಲ್ಲಿ ಒಟ್ಟು 46,755 ಸರ್ಕಾರಿ ಶಾಲೆಗಳು ಇವೆ. ಅದರಲ್ಲಿ 21,255 ಶಾಲಾ ಕಟ್ಟಡಗಳು ಶಿಥಿಲಗೊಂಡು ಅಪಾಯದಲ್ಲಿವೆ. ಇದರಲ್ಲಿ ಮೈಸೂರಿನ 1,716 ಶಾಲೆಗಳು ಕೂಡ ಒಳಗೊಂಡಿದೆ ಎಂದರು.

ಹಲವು ವರ್ಷಗಳಿಂದ ದುರಸ್ತಿ ಕಾಣದ ಶಾಲೆಗಳ ಛಾವಣಿ ಕುಸಿದು ಮಕ್ಕಳು ಗಾಯಗೊಂಡಿರುವುದು, ಪ್ರಾಣ ಕಳೆದುಕೊಂಡಿರುವಂತಹ ಹೃದಯವಿದ್ರಾವಕ ಘಟನೆಗಳು ನಡೆದಿವೆ. ಬಳ್ಳಾರಿ ತಾಲೂಕಿನ ಶಂಕರ ಬಂಡೆ ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿನಿ ಶಾಲೆಯ ಛಾವಣಿ ಕುಸಿದು ಗಾಯಗೊಂಡು ನಂತರ ಸಾವಿಗೀಡಾಗಿದ್ದು ಅತ್ಯಂತ ನೋವಿನ ಘಟನೆ. ಆದರೂ ಸರ್ಕಾರ ಶಾಲೆಗಳ ದುರಸ್ತಿಗೆ ಮುಂದಾಗಿಲ್ಲ. ಶಾಲೆಗೆ ಈ ಪರಿಸ್ಥಿತಿಗೆ ಮೂಲ ಕಾರಣವನ್ನು ಬೆನ್ನಟ್ಟಿ, ಬುಡಮೇಲು ಮಾಡುವ ವರದಿ ಮಾಡಬೇಕಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳು ಬಡಮಕ್ಕಳ ಶಿಕ್ಷಣದ ಆಶಾಕಿರಣ. ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ. ಈ ಶಾಲೆಗಳಿಗೆ ಶಿಕ್ಷಣದ ಕನಸು ಹೊತ್ತು ಬರುವವರು ಬಹುತೇಕರು ಬಡವರಾಗಿದ್ದು, ರೈತ-ಕಾರ್ಮಿಕರ ಮಕ್ಕಳು. ಅಂತಹ ನಮ್ಮ ಸರ್ಕಾರಿ ಶಾಲೆಗಳ ಇಂದಿನ ಪರಿಸ್ಥಿತಿ ಬಹಳ ಶೋಚನೀಯ ಹಾಗೂ ಚಿಂತಾಜನಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಗಳು ಮೂಲಸೌಕರ್ಯಗಳನ್ನು ಒದಗಿಸದೆ, ಕಟ್ಟಡಗಳನ್ನು ದುರಸ್ತಿ ಮಾಡದೆ ಶಿಕ್ಷಕರ ನೇಮಕಾತಿ ಮಾಡದೆ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬ ನೆಪವೊಡ್ಡಿ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ ಎಂದರು.

ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿಲ್ಲ ಎಂಬ ಮಾತನ್ನು ಹೇಳಿ ಖಾಸಗಿ ಶಾಲೆಗಳಿಗೆ ಪರವಾನಗಿ ಕೊಟ್ಟು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ. ಇಂತಹ ಸಬೂಬು ಹೇಳುವುದನ್ನು ಬಿಟ್ಟು, ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಬೇಕು, ಕಟ್ಟಡಗಳ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಲೆಗಳು ಮೇ 29ರಂದು ಆರಂಭಗೊಳ್ಳಲಿವೆ. ಈ ಬಾರಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಬೇಕು. ಅಲ್ಲದೇ ಅಗತ್ಯ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಮಾಡಿ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ಕಾರ್ಯಕರ್ತರಾದ ಅಭಿಷೇಕ್, ಯಶವಂತ್, ರಚನಾ, ಲೋಚನಾ, ಉಲ್ಲಾಸ್, ವಿಕಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net