ಸಮಸ್ಯೆ ಪರಿಹರಿಸಲು ಎಐಡಿಎಸ್‌ಒ ಒತ್ತಾಯ

VMS 26-5
Published on

ವಿಜಯಪುರ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಒತ್ತಾಯಿಸಿ (ಎಐಡಿಎಸ್‌ಒ) ಕರ್ನಾಟಕ ರಾಜ್ಯದ್ಯಾಂತ ವಿದ್ಯಾರ್ಥಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಶೋಭಾ ಎಸ್ ಮಾತನಾಡಿ, ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆ-ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ವಿಶ್ವವಿದ್ಯಾಲಯಗಳ ಪರೀಕ್ಷೆ ಶುಲ್ಕಗಳನ್ನು ರದ್ದು ಪಡಿಸಬೇಕು. ಈಗಾಗಲೇ ಶುಲ್ಕ ಪಡೆದಲ್ಲಿ ಅದನ್ನು ವಾಪಾಸು ಮಾಡಬೇಕು. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಹೆಚ್ಚಿಸಿ ಕಡ್ಡಾಯವಾಗಿ ನೀಡಬೇಕು. ಸರ್ಕಾರಿ ಹಾಸ್ಟೆಲ್‌ಗಳ ಅನುದಾನ ಹೆಚ್ಚಿಸಿ ಹಾಗೂ ಹಾಸ್ಟೆಲ್ ಸೌಕರ್ಯವನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಓದಗಿಸಬೇಕು. ಆನ್‌ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆ ನಡೆಸಬಾರದು. ಪರೀಕ್ಷೆ ರೂಪುರೇಷೆಯನ್ನು ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸಬೇಕು. ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿದ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ಸ್ಯಾನಿಟೈಸ್ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಅವನ್ನು ತೆರೆಯಬೇಕು. ಇತರೆ ಕ್ಷೇತ್ರಗಳ ಕಷ್ಟದಲ್ಲಿರುವ ಜನರಿಗೂ ಸೇರಿದಂತೆ ವಿದ್ಯಾರ್ಥಿ ಸಮುದಾಯಕ್ಕೂ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಸಾವಿತ್ರಿ ಮನಗೂಳಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಯೋಜನಾ ರಹಿತ ಲಾಕ್‌ಡೌನ್ ನ ಪರಿಣಾಮವಾಗಿ ಶಿಕ್ಷಣದಿಂದ ಸಹಸ್ರಾರು ವಿದ್ಯಾರ್ಥಿಗಳು ವಂಚಿತರಾಗುವ ಸಂಭವವಿದೆ. ಆದ ಕಾರಣ ಸರ್ಕಾರವು ಈ ವರ್ಷ ಹಾಸ್ಟೆಲ್ ವಿದ್ಯಾರ್ಥಿಗಳನ್ನೂ ಒಳಪಟ್ಟು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ವಿಸ್ತರಿಸಬೇಕು ಹಾಗೂ ವೇತನದ ಮೊತ್ತವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಮನವಿ ಸಲ್ಲಿಸುವಾಗ ಎಐಡಿಎಸ್‌ಒ ಸಂಘಟನೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net