ವಿದ್ಯಾರ್ಥಿವೇತನಕ್ಕೆ ಆಗ್ರಹಿಸಿ ಎಐಡಿಎಸ್‌ಒ ಪ್ರತಿಭಟನೆ

21 Dwd 5
Published on

ಧಾರವಾಡ: ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಖಾತ್ರಿಪಡಿಸಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಶಶಿಕಲಾ ಮೇಟಿ ಮಾತನಾಡಿ, ಮಳೆ ಇಲ್ಲದೆ ಜಿಲ್ಲೆಯ ರೈತ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆ ಜನರ ಜೀವನವನ್ನು ದುಸ್ತರಗೊಳಿಸಿದೆ. ಶಿಕ್ಷಣದ ಶುಲ್ಕಗಳು ಗಗನಕ್ಕೇರಿದೆ. ವೆಚ್ಚ ಭರಿಸಲಾಗದೆ ಶಾಲೆ- ಕಾಲೇಜುಗಳನ್ನು ತೊರೆಯುತ್ತಿರುವ ಬಡ ಮಕ್ಕಳು ಕುಟುಂಬಕ್ಕೆ ನೆರವಾಗಲು ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಲು ಸೌಲಭ್ಯಗಳನ್ನು ಹೆಚ್ಚಿಸಬೇಕಿದ್ದ ರಾಜ್ಯ ಸರ್ಕಾರ, ವಿದ್ಯಾರ್ಥಿ ವೇತನ ಕಡಿತಗೊಳಿಸುತ್ತಿದೆ. ಕಳೆದ ವರ್ಷದ ವಿದ್ಯಾರ್ಥಿ ವೇತನ ಇನ್ನೂ ದೊರೆತಿಲ್ಲ. ಈ ಬಾರಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ತಾಂತ್ರಿಕ ದೋಷಗಳಿಂದ ಕೂಡಿದ್ದು, ಬಹುತೇಕ  ಅರ್ಜಿಗಳು ಸ್ವೀಕೃತವಾಗಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಲ್ಲಬೇಕಿದ್ದ ಶಿಷ್ಯವೇತನದ ಮೊತ್ತವನ್ನು  ಕಡಿತಗೊಳಿಸಿದೆ. ಸರ್ಕಾರವು ಗಮನ ಹರಿಸಿ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಸಂಘಟನೆಯ ಸಿಂಧು ಕೌದಿ, ಸ್ಫೂರ್ತಿ, ಹರ್ಷಿತ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net