

ಮೈಸೂರು: ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಒ) ಖಂಡಿಸಿದೆ.
ರಾಜ್ಯ ಸರ್ಕಾರವು ಈ ಬಾರಿ ಕೂಡ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಶುಲ್ಕದಲ್ಲಿ 1,400 ರೂ. ಪ್ರತಿಷ್ಠಿತ ಯುವಿಸಿಇ ( ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ಶುಲ್ಕದಲ್ಲಿ 2,000 ರೂ. ಹೆಚ್ಚಿಸಿದೆ. 3 ವರ್ಷಗಳ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವು ದ್ವಿಗುಣಗೊಂಡು 42,000 ರೂ. ಏರಿಕೆಯಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ತಮ್ಮನ್ನು ಬಡಜನರ ಪರ, ದಮನಿತರ ಪರ ಎಂದು ಕರೆದುಕೊಳ್ಳುವ ಯಾವುದೇ ಸರ್ಕಾರ ಕೂಡ ಈ ರೀತಿ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ.
ಕುತಂತ್ರದಿಂದ ಯುವಿಸಿಇಯನ್ನು ಪ್ರತ್ಯೇಕವಾಗಿರಿಸಿ ಶುಲ್ಕವನ್ನು ಹೆಚ್ಚಿಸಿರುವುದು, ಈ ಮಹಾನ್ ಸಂಸ್ಥೆಯನ್ನು ಸ್ವ-ಹಣಕಾಸು ಸಂಸ್ಥೆಯನ್ನಾಗಿಸುವುದರ ವಿರುದ್ಧ ಧ್ವನಿ ಎತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರ ಪ್ರತಿಭಟನೆಯ ಕೂಗಿಗೆ ಸರ್ಕಾರ ಕಿವುಡಾಗಿರುವುದನ್ನು ಸಾಬೀತು ಪಡಿಸುತ್ತದೆ. ಈ ಶುಲ್ಕ ಹೆಚ್ಚಳವು ಅಪರಾಧ ಎಂದು ನಾವು ಪರಿಗಣಿಸುತ್ತೇವೆ. ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.