ಮಧ್ಯವಾರ್ಷಿಕ ಪರೀಕ್ಷೆ ಗೊಂದಲ ಬಗೆಹರಿಸಲು ಎಐಡಿಎಸ್‌ಒ ಆಗ್ರಹ

Exam
Published on

ಮೈಸೂರು: ಪ್ರಥಮ ಪಿಯು ಮಧ್ಯವಾರ್ಷಿಕ ಪರೀಕ್ಷೆ ಕುರಿತ ಉಂಟಾಗಿರುವ ಗೊಂದಲವನ್ನು ಕೂಡಲೇ ಬಗೆಹರಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್(ಎಐಡಿಎಸ್‌ಒ) ಆಗ್ರಹಿಸಿದೆ.


ಈ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ನಡೆಸುವುದು ಕೆಎಸ್‌ಇಎಬಿಯೇ ಅಥವಾ ಪಿಯು ಇಲಾಖೆಯೇ ಎನ್ನುವ ಕುರಿತು ಬಹಳ ಗೊಂದಲ ಇದೆ. ಬಹಳ ವರ್ಷಗಳಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪಿಯು ಇಲಾಖೆಯೇ ಪರೀಕ್ಷೆ ನಡೆಸುವ ಜತೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿತ್ತು.

ಆದರೆ, ಈ ಬಾರಿ ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ಕುರಿತು ಸ್ಪಷ್ಟ ನಿಲುವು ಹೊಂದದೇ ಇರುವುದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಇಲಾಖೆಗಳ ನಡುವೆಯೇ ಸ್ಪಷ್ಟತೆ ಇಲ್ಲದೆ, ವಿದ್ಯಾರ್ಥಿಗಳನ್ನು ಅತಂತ್ರಕ್ಕೆ ತಳ್ಳುವಂತಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿಖಿನ್ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.


ಅರ್ಧ ವಾರ್ಷಿಕ ಪರೀಕ್ಷೆಗೆ ಯಾರು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೈಗೊಳ್ಳಬೇಕು. ಈಗ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ನಿರ್ಧಾರ ಕೈಗೊಳ್ಳದೆ, ಒತ್ತಡದಲ್ಲಿರುವ ವಿದ್ಯಾರ್ಥಿಗಳ ಮೇಲೆ ಇದು ಇನ್ನಷ್ಟು ಒತ್ತಡವನ್ನು ಉಂಟು ಮಾಡುತ್ತದೆ. ಪ್ರಸ್ತುತ ರಾಜ್ಯ ಸರ್ಕಾರವು ಶೈಕ್ಷಣಿಕ ವರ್ಷದ ನಡುವೆ ಈ ರೀತಿ ಹಲವು ನಿರ್ಧಾರ ಕೈಗೊಳ್ಳದಿರುವುದು ಅಥವಾ ಹಠಾತ್ತಾಗಿ ನಿರ್ಧಾರಗಳನ್ನು ಹೇರುತ್ತಿರುವುದು ಅಪ್ರಜಾತಾಂತ್ರಿಕ ಧೋರಣೆ ತೋರಿಸುತ್ತದೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಜ್ಞರ ಅಭಿಪ್ರಾಯಗಳನ್ನು ಪಡೆಯದೆ ಈ ರೀತಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಯಾವ ಇಲಾಖೆ ಪರೀಕ್ಷೆಗಳನ್ನು ನಡೆಸುತ್ತದೆ ಎಂಬ ನಿರ್ಧಾರವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net