

ಹಾಸನ: ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವಂತೆ, ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಮಧುಗಿರಿ ಮೋದಿ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಕೇಂದ್ರ ಬಜೆಟ್‌ನಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಯಿತು.
ಸರ್ಕಾರಿ ಕಾಲೇಜುಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಆಡಿದ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಸಂಸ್ಥೆ (ಎಐಡಿಎಸ್‌ಒ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳನ್ನು ಹೊರಗಿಟ್ಟು ಯೋಜನೆ ಜಾರಿಗೊಳಿಸಲಾಗಿದೆ. ಪದವಿ ಮುಗಿಸಿ ಮುಂದಿನ ವ್ಯಾಸಂಗ ಅಥವಾ ಉದ್ಯೋಗ ಅರಸಿ ಹೋಗುವ ಯುವಕ, ಯುವತಿಯರಿಗೆ ಲ್ಯಾಪ್‌ಟಾಪ್‌ನ ಅವಶ್ಯಕತೆಯಿದೆ. ಆದರೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ನೀಡಲು ನಿರ್ಧರಿಸಿರುವ ಸರ್ಕಾರ ತಪ್ಪು ಹೆಜ್ಜೆ ತಪ್ಪಿ ಎಂದು ಪ್ರತಿಭಟನಾನಿರತರು ಆರೋಪಿಸಿದರು.
2016ರಲ್ಲಿ ಲ್ಯಾಪ್‌ಟಾಪ್ ನೀಡಿದ್ದ ರಾಜ್ಯ ಸರ್ಕಾರ ನಂತರ ಸ್ಥಗಿತಗೊಳಿಸಿತ್ತು. ಆ ಬಳಿಕ ಮೂರು ವರ್ಷದ ಅನುದಾನ ಯಾವುದಕ್ಕೆ ಬಳಕೆಯಾಗಿದೆ ಎಂಬ ಮಾಹಿತಿ ಇಲ್ಲ. ಜತೆಗೆ ಅರ್ಹ ಮಕ್ಕಳಿಗೆ ಲ್ಯಾಪ್‌ಟಾಪ್ ಸಿಗುತ್ತಿಲ್ಲ. ಇನ್ನಾದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರಿಗೂ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಚುನಾವಣಾ ತಹಸೀಲ್ದಾರ್ ಪದನ್ಮಾಭ ಶಾಸ್ತ್ರಿ ಅವರಿಗೆ ಮನವಿ ಸಲ್ಲಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್, ಅಂಕಿತಾ, ಕವನಾ, ಐಶ್ವರ್ಯ, ನಾಗರಾಜ್, ನೂತನ್ ಇತರರಿದ್ದರು.