ನೀಟ್, ನೆಟ್ ಪರೀಕ್ಷಾ ಅಕ್ರಮ ತನಿಖೆಗೆ ಎಐಡಿಎಸ್‌ಒ ಆಗ್ರಹ

AIDSO PROTEST NEET
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಎಐಡಿಎಸ್‌ಒ ನೇತೃತ್ವ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸುಭಾಷ ಬೆಟ್ಟದಕೊಪ್ಪ, ಕಾವೇರಿ ರಜಪೂತ, ಶಿಲ್ಪಾ ಬಿ.ಕೆ ಮತ್ತಿತರರಿದ್ದಾರೆ.
Published on

ಮೈಸೂರು: ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಒ) ಆಗ್ರಹಿಸಿದೆ.


ನೀಟ್ ನಂತರ ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೇಳಿ ಬಂದಿದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ನೀಟ್ ಪರೀಕ್ಷೆಯಲ್ಲಿ ನಡೆದ ಗಂಭೀರ ಪ್ರಮಾಣದ ಅವ್ಯವಹಾರವನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರಯತ್ನಿಸುತ್ತಲೇ ಇವೆ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.


ನೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳು ಈ ಪ್ರಕರಣದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿವೆ. ಅಲ್ಲದೆ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ, ಪವಿತ್ರತೆಯನ್ನು ಕಾಪಾಡಲು ಪರೀಕ್ಷೆ ನಡೆದ ಮರುದಿನವೇ ಅದನ್ನು ರದ್ದುಪಡಿಸಿ ಸಿಬಿಐಗೆ ಒಪ್ಪಿಸಲಾಗಿದೆ. ಈ ನಡೆಯು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪರೀಕ್ಷಾ ಕೇಂದ್ರಗಳಿಗೆ ತಲುಪಲು ದೂರದ ಪ್ರಯಾಣ, ವಸತಿ, ಅಧಿಕ ಪ್ರಮಾಣದ ಪರೀಕ್ಷಾ ಶುಲ್ಕ ಸೇರಿದಂತೆ ಅಭ್ಯರ್ಥಿಗಳ ವೆಚ್ಚಕ್ಕೆ ಯಾರು ಹೊಣೆ? ಎಲ್ಲದಕ್ಕೂ ಮಿಗಿಲಾಗಿ ಎನ್‌ಟಿಎ ಪ್ರದರ್ಶಿಸುತ್ತಿರುವ ಬೇಜವಾಬ್ದಾರಿ, ಅಸಮರ್ಥತೆ ಮತ್ತು ಪಾರದರ್ಶಕತೆಯ ಕೊರತೆಯು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದುಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ


ವ್ಯಾಪಾರೀಕರಣ, ಅನಾರೋಗ್ಯ ಪೀಡಿತ ಸ್ಪರ್ಧೆ ಮತ್ತು ವ್ಯಾಪಕ ಭ್ರಷ್ಟಾಚಾರವು ಜಾರಿಯಲ್ಲಿರುವಾಗ, ಒಂದು ಕೇಂದ್ರೀಕೃತ ಪರೀಕ್ಷೆಯು ಭ್ರಷ್ಟಾಚಾರದ ಏಕಸ್ವಾಮ್ಯಾಧಿಕಾರವನ್ನು ಉಂಟು ಮಾಡಬಲ್ಲದೆ ಹೊರತು, ಈ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು.

ಜತೆಗೆ, ಶಿಕ್ಷಕರು ಮತ್ತು ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು. ಪ್ರಬಲ ಕೋಚಿಂಗ್ ಸಂಸ್ಥೆಗಳ ಮೇಲೆ ನಿಬಂಧನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.


ಪ್ರಕರಣವು ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸೆಲಿಂಗ್ ಅನ್ನು ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಿ, ನೇರವಾಗಿ ಯುಜಿಸಿಯೇ ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net