

ಮೈಸೂರು: ಎಐಡಿಎಸ್‌ಒ ವತಿಯಿಂದ ನಗರದ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 7ನೇ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನದಲ್ಲಿ ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿ ರೂಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳ ಲಾಯಿತು.
ಶಿಕ್ಷಣದ ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ಜನಪರ ಶಿಕ್ಷಣ ನೀತಿ ಜಾರಿಗೊಳಿಸ ಬೇಕು. ವಿದ್ಯಾರ್ಥಿಗಳ ಕೊರತೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು ಹಾಗೂ ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಾಯ ಕೈಗೊಳ್ಳಲಾಯಿತು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಮಾತನಾಡಿ, ಸ್ವಾತಂತ್ರೃ ಬಂದು 75 ವರ್ಷಗಳು ಕಳೆದರೂ ಎಲ್ಲರಿಗೂ ಉಚಿತ ಶಿಕ್ಷಣ ಕನಸಿನ ಮಾತಾಗಿದೆ. ಆರ್ಥಿಕ ಸಮಸ್ಯೆಯಿಂದ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಮಾತನಾಡಿ, ರಾಜ್ಯದಲ್ಲಿ ಎನ್‌ಇಪಿಯನ್ನು -2020 ತೆಗೆದು ಹಾಕಲು ಮುಖ್ಯ ಕಾರಣ ವಿದ್ಯಾರ್ಥಿಗಳ ಹೋರಾಟ. ರಾಜ್ಯ ಶಿಕ್ಷಣ ನೀತಿಯಲ್ಲಿ ಸರ್ಕಾರಿ ಶಾಲಾ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ ನಾ. ದಿವಾಕರ್ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕವಾಗಿ,ರಾಜಕೀಯವಾಗಿ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸರ್ಕಾರ ಕೈಗೊಳ್ಳುವ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಎಐಡಿಎಸ್‌ಒ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು. ಸುಭಾಷ್(ಅಧ್ಯಕ್ಷ), ಚಂದ್ರಕಲಾ (ಕಾರ್ಯದರ್ಶಿ),ನಿತಿನ್, ಸ್ವಾತಿ (ಉಪಾಧ್ಯಕ್ಷರು), ಚಂದನ, ಚಂದ್ರಿಕಾ, ಹೇಮಲತಾ, ಅಂಜಲಿ, ದಿಶಾ , ಧನುಶ್ರೀ ಅಭಿಷೇಕ್ ಬೀರಪ್ಪ, ಜಟ್ಟಪ್ಪ , ಮಣಿಕಂಠ ಕಾರ್ಯದರ್ಶಿ ಮಂಡಳಿ ಸದಸ್ಯರು) ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಪುಷ್ಪಾ ಹಾಗೂ ಇತರರು ಇದ್ದರು.