

ಮೈಸೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕ್ರಮವನ್ನು ಎಐಡಿಎಸ್‌ಒ ಖಂಡಿಸಿದೆ.
ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿರುವ ಎಎಂಸಿಯು ಕಾಲೇಜು ನಡೆಸಲು ಅಪೇಕ್ಷಿತ ಗುಣಮಟ್ಟವನ್ನು ಹೊಂದದಿರುವುದಕ್ಕೆ ದಂಡ ವಿಧಿಸಿದೆ. ರಾಜ್ಯದ 13 ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ 11 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ.
ದಂಡದ ಮೊತ್ತವು 2 ಲಕ್ಷ ರೂಪಾಯಿಯಿಂದ 15 ಲಕ್ಷ ರೂ. ವರೆಗೂ ಇದೆ. ವೈದ್ಯಕೀಯ ಕಾಲೇಜುಗಳು ಅಪೇಕ್ಷಿತ ಗುಣಮಟ್ಟವನ್ನು ಕಾಪಾಡಲೇಬೇಕು. ಆದರೆ, ಈ ರೀತಿ ದಂಡ ವಿಧಿಸುವುದು ಅತ್ಯಂತ ಅಪ್ರಜಾತಾಂತ್ರಿಕವಾಗಿದೆ. ಎನ್‌ಎಂಸಿಯ ಈ ನಡೆ ಗುಣಮಟ್ಟದ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿ ಸಂಖ್ಯೆಯು ಕಡಿಮೆ ಇದ್ದು, ಮೂಲಸೌಕರ್ಯಗಳು ಅವಶ್ಯಕ ಮಟ್ಟದಲ್ಲಿ ಇರದಿದ್ದರೆ, ಇದರ ಜವಾಬ್ದಾರಿ ಹೊತ್ತು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಸಮರ್ಪಕ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಡಳಿತ ವರ್ಗವೇ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಅವ್ಯವಸ್ಥೆಯ ಕುರಿತು ಹಲವಾರು ವರದಿಗಳು ವಿವರಿಸಿವೆ. ರಾಜ್ಯ ಸರ್ಕಾರ ಅಥವಾ ಎನ್‌ಎಂಸಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಣಕಾಸು ಸಹಾಯ ಒದಗಿಸುವುದರ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ತೆರೆದು ದುಡ್ಡು ಮಾಡಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ.
ವೈದ್ಯಕೀಯ ಶಿಕ್ಷಣವನ್ನು ಉತ್ತಮಪಡಿಸುವ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುವ ಧೋರಣೆಯನ್ನು ಎನ್‌ಎಂಸಿ ಈ ನಡೆ ಎತ್ತಿ ತೋರಿಸುತ್ತಿದೆ. ಇದು ಖಂಡನೀಯ. ವೈದ್ಯಕೀಯ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಸಮರ್ಪಕ ಹಣಕಾಸು ರಾಜ್ಯ ಸರ್ಕಾರವು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.