ಕೊಲ್ಕತ್ತಾದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ ಖಂಡನೆ, ಎಐಡಿಎಸ್‌ಒ-ಎಐಎಂಎಸ್‌ಎಸ್ ನೇತೃತ್ವ ಪ್ರತಿಭಟನೆ

AIDSO-AIMSS PROTEST
ವಿಜಯಪುರ ಜಿಲ್ಲಾಡಳಿತಕ್ಕೆ ಎಐಎಂಎಸ್‌ಎಸ್ ಹಾಗೂ ಎಐಡಿಎಸ್‌ಒ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಎನ್.ಯು. ಸಾರವಾಡ, ಸಿದ್ಧಲಿಂಗ ಬಾಗೇವಾಡಿ, ಅಂಜಲಿ ಫರನಾಕರ ಮತ್ತಿತರರಿದ್ದಾರೆ.
Published on

ವಿಜಯಪುರ: ಕೊಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿಎಸ್‌ಒ) ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪದಾಧಿಕಾರಿಗಳು ಘಟನೆ ಖಂಡಿಸಿ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಬಾಂಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಎನ್.ಯು. ಸಾರವಾಡ ಮಾತನಾಡಿ, ಆ. 8ರಂದು ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಯುವ ವೈದ್ಯೆಯ ಮೃತ ದೇಹವು ಶುಕ್ರವಾರ ಬೆಳಗ್ಗೆ ಕಾಲೇಜಿನ ಮೂರನೇ ಮಹಡಿಯ ಸೆಮಿನಾರ್ ಹಾಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಗೆ ಮೂಳೆ ಮುರಿದು, ಕಣ್ಣು, ಬಾಯಿ, ಖಾಸಗಿ ಅಂಗದಲ್ಲೂ ರಕ್ತಸ್ರಾವ ಆಗುವಷ್ಟು ಭೀಕರವಾದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ವರದಿಯಾಗಿದೆ. ಇದು ದೇಶದ ನಾಗರಿಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನು ಉಂಟು ಮಾಡಿದೆ. ಜನರ ಜೀವವನ್ನು ರಕ್ಷಿಸಬೇಕಾದ ವೈದ್ಯರಿಗೇ ರಕ್ಷಣೆ ಇಲ್ಲದಂತಾಗಿರುವುದು ಅತ್ಯಂತ ಹೇಯ ಕೃತ್ಯ ಎಂದರು.

ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಅಮಾನುಷ ಕೊಲೆ ಪ್ರಕರಣವು ಅತ್ಯಂತ ಆಘಾತಕಾರಿಯಾಗಿದ್ದು, ಅಪರಾಧಿಗಳನ್ನು ಬಂಧಿಸಿ ನಿದರ್ಶನೀಯ ಶಿಕ್ಷೆ ನೀಡಬೇಕು. ಈ ಘಟನೆಯ ದಿಕ್ಕುತಪ್ಪಿಸಲು ಅವಕಾಶ ಮಾಡಿಕೊಡದೆ ತೀರ್ವಗತಿಯಲ್ಲಿ ತನಿಖೆ ನಡೆಯಲಿ, ಸರ್ಕಾರ ಮಹಿಳೆಯರಿಗೆ ರಕ್ಷಣೆಯನ್ನು ಖಾತ್ರಿಪಡಿಸಲಿ, ವರ್ಮಾ ಅವರ ಶಿಫಾರಸುಗಳು ಜಾರಿಯಾಗಲಿ, ಅಶ್ಲೀಲತೆಯನ್ನು ಕೊನೆಗಾಣಿಸಿ ಎಂದು ಆಗ್ರಹಿಸಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ವೈದ್ಯೆ ವಿದ್ಯಾರ್ಥಿನಿಯ ಮೇಲಾದ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಏಕಾಏಕಿ ಸಮಾಜಘಾತುಕ ಶಕ್ತಿಗಳು ದಾಳಿ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟಿಸಲು ಆ.14 ರಂದು ಮಧ್ಯರಾತ್ರಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿಗೆ ನುಗ್ಗಿ ಪ್ರತಿಭಟನೆಯ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿರುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಈ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.

ವಿದ್ಯಾರ್ಥಿಗಳಾದ ಶಾಶ್ವತ ತೇರದಾಳ ಹಾಗೂ ಶಶಾಂಕ ಪಾಟೀಲ ಮಾತನಾಡಿ, ತಾಯಿ ಸಮಾನರಾದ ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ರಕ್ಷಣೆ ಇಲ್ಲದಿರುವದು ಬಹಳ ನೋವಿನ ವಿಷಯ. ಇಂತಹ ಘಟನೆಯ ವಿರುದ್ಧ ನಾವೆಲ್ಲ ಒಂದಾಗಿ ಹೋರಾಡಬೇಕು ಎಂದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ, ರಣಜಿತ್ ಜಾಧವ, ಸಲ್ಮಾನ ಬಗಲಿ, ಅಂಜಲಿ ಫರನಾಕರ, ಸ್ನೇಹಾ ಸಾಲಗಲ, ನೇಹಾ ಪವಾರ, ಅಶ್ವೀನಿ ಚವಾಣ್, ಈರಮ್ಮ ಹಿರೇಕೊಪ್ಪ, ಶ್ವೇತಾ ಕಾಶಿಬಾಯಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net