

ಮೈಸೂರು: ಎಚ್‌ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜೆ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ಈ ಹಿಂದೆ ಸಮಾಜದಲ್ಲಿ ಎಚ್‌ಐವಿ ಸೋಂಕಿತರನ್ನು ನೋಡುವ ರೀತಿ ಹಾಗೂ ಅವರ ಜತೆ ವರ್ತಿಸುವ ರೀತಿಯೇ ಬೇರೆಯಾಗಿತ್ತು. ಆದರೆ, ಆರೋಗ್ಯ ಇಲಾಖೆ ಮೂಡಿಸಿದ ಜಾತಿ ಫಲವಾಗಿ ಇತ್ತೀಚೆಗೆ ಎಚ್‌ಐವಿ ಸೋಂಕಿತರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗುತ್ತಿದೆ. ಈ ಹಿಂದೆ ಎಚ್‌ಐವಿ ಸೋಂಕಿತರು ಆತಂಕ ಹಾಗೂ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಸಮಾಜದಲ್ಲಿ ಎಚ್‌ಐವಿ ಸೋಂಕಿತರ ಬಗೆಗಿನ ಅಭಿಪ್ರಾಯ ಬದಲಾಗಿರುವ ಹಿನ್ನೆಲೆಯಲ್ಲಿ ಎಚ್‌ಐವಿ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದರು.
ಮಕ್ಕಳು ತಮ್ಮದಲ್ಲದ ತಪ್ಪಿಗೆ ಎಚ್‌ಐವಿ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಅಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನು ನಾವು ಸ್ಮರಿಸಲೇಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಕೆಲಸ ನಿರ್ವಹಿಸಿದೆ. ಅದೇ ರೀತಿ ಎಚ್‌ಐವಿ ಸೋಂಕಿತರ ಆರೋಗ್ಯ ವೃದ್ಧಿಸುವಲ್ಲಿ ಆರೋಗ್ಯ ಇಲಾಖೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಡಿ.1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಸಲಾಗುತ್ತದೆ. 1986ರಲ್ಲಿ ಈ ಸೋಂಕು ಕಾಣಿಸಿಕೊಂಡ ಸಂದರ್ಭ ಸೋಂಕಿನ ಬಗ್ಗೆ ಮುಕ್ತವಾಗಿ ಮಾತನಾಡಲು ಎಲ್ಲರೂ ಸಂಕೋಚ ಪಡುತ್ತಿದ್ದರು. ಹಲವಾರು ಅರಿವಿನ ಕಾರ್ಯಕ್ರಮಗಳ ಪರಿಣಾಮ ಇದೀಗ ಸೋಂಕಿನ ಕುರಿತು, ಸೋಂಕಿತರ ಪರವಾಗಿ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗಿದೆ ಎಂದರು.
ರೋಗಿಗಳಲ್ಲಿ ಸಮುದಾಯದವರು ಆತ್ಮವಿಶ್ವಾಸ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ‘ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ವಾಸಿ ಮಾಡಲು ಸಾಧ್ಯವಾಗದಿದ್ದರೂ ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ಸೇವಿಸಿ ಉತ್ತಮ ಜೀವನ ಶೈಲಿ ಅಳವಡಿಸಿಕೊಂಡರೆ ದೀರ್ಘ ಕಾಲ ಉತ್ತಮವಾಗಿ ಬದುಕಬಹುದು ಎಂದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಮೊಹಮ್ಮದ್ ಸಿರಾಜ್ ಮಾತನಾಡಿ, 2022 ರಲ್ಲಿ ಜಿಲ್ಲೆಯಲ್ಲಿ 50 ಸಾವಿರ ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, 25 ಪಾಸಿಟಿವ್ ಪ್ರಕರಣಗಳು ಕಂಡು ಬಂತು. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದು ಸಂತಸದ ವಿಷಯ. ಇದನ್ನು ಶೂನ್ಯಕ್ಕಿಳಿಸಲು ಮತ್ತಷ್ಟು ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ಜಯಂತ್, ಎಆರ್‌ಟಿ ಮೆಡಿಕಲ್ ಆಫೀಸರ್ ಗೋವಿಂದರಾಜು, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಇತರರು ಇದ್ದರು.