ಬದುಕು ರೂಪಿಸಿಕೊಳ್ಳುವ ಜ್ಞಾನ ಅವಶ್ಯ

Photo 2WC
Published on

ಹೊಳೆನರಸೀಪುರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಮಾದಯ್ಯ ತಿಳಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಯುವ ರೆಡ್‌ಕ್ರಾಸ್ ಘಟಕ ಸಂಯುಕ್ತ್ತವಾಗಿ ಆಯೋಜನೆ ಮಾಡಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ಜೀವನದ ಕ್ರಮ ಹೇಗಿರಬೇಕು, ಬದುಕಿಗೆ ಪೂರಕವಾದ ಅಂಶಗಳ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು, ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಕಲಿಯುವುದು ಉತ್ತಮ. ನಮ್ಮತನ, ಆತ್ಮಾಭಿಮಾನ ಮತ್ತು ಪಾಲಕರ ಘನತೆಗೆ ಕಿಂಚಿತ್ತೂ ಧಕ್ಕೆ ಉಂಟಾಗದಂತೆ
ಜೀವನ ರೂಪಿಸಿಕೊಳ್ಳಬೇಕು.ಯೌವ್ವನದ ಆಕರ್ಷಣೆಗೆ ಒಳಗಾಗದೇ ವಾಸ್ತವ ಅರಿತು ಪರಿಶುದ್ಧವಾಗಿ ಮುನ್ನಡೆದಾಗ ಮಾತ್ರ ಪರಿಪೂರ್ಣವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು. ತಾಲೂಕು ಭಾರತೀಯ ರೆಡ್‌ಕ್ರಾಸ್ ಘಟಕದ ಸಭಾಪತಿ ಪುಟ್ಟೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೆಡ್‌ಕ್ರಾಸ್ ಚಟುವಟಿಕೆ ಮಾದರಿಯಾಗಿದೆ . ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಮಂಜುರಾಜ್, ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಎಂ.ಕೆ.ಭಾನುಶ್ರೀ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಕೆ.ಎಸ್. ಚಂದ್ರಕಲಾ ಮಾತನಾಡಿದರು. ವಿದ್ಯಾರ್ಥಿ ಮುಖಂಡರಾದ ವಿದ್ಯಾ, ಪುಷ್ಪಾ, ಶಿಲ್ಪಾ, ಉಷಾ, ವರಲಕ್ಷ್ಮೀ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net