

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ವರವಿನರಹಟ್ಟಿ ನಿವಾಸಿ ಭಾಗ್ಯಮ್ಮ ಎಂಬುವರ ಗುಡಿಸಲಿಗೆ ಬುಧವಾರ ತಡರಾತ್ರಿ ಬೆಂಕಿ ತಗುಲಿ ಅಪಾರ ಪ್ರಮಾಣದ ದವಸ-ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು, 2 ಲಕ್ಷ ರೂ. ನಷ್ಟವಾಗಿತ್ತು.
ವಾಸದ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬಸ್ಥರನ್ನು ಸ್ಥಳೀಯ ಗ್ರಾಪಂ ಅಧ್ಯಕ್ಷೆ ಶಿವಮ್ಮ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ನೆರವು ಘೋಷಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಪಾಲಯ್ಯ ಮಾತನಾಡಿ, ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ತಾತ್ಕಾಲಿಕವಾಗಿ ಜೀವನ ನಿರ್ವಹಿಸಲು ವಾಲ್ಮೀಕಿ ಭವನದಲ್ಲಿ ವಸತಿ ಕಲ್ಪಿಸಲಾಗಿದೆ.
ಪಂಚಾಯಿತಿ ವತಿಯಿಂದ 10 ಸಾವಿರ ರೂ. ಧನಸಹಾಯ ಮಾಡಲಾಗಿದ್ದು, ಆದ್ಯತೆ ಮೇರೆಗೆ ವಸತಿ ಮಂಜೂರಾತಿಗೆ ಅವಕಾಶ ಮಾಡಲಾಗುವುದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಸಣ್ಣಬೋರಮ್ಮ, ಓಬಯ್ಯ, ದೊರೆ ಬೈಯ್ಯಣ್ಣ, ದೊರೆ ನಾಗರಾಜ, ಪಿ.ಪ್ರಹ್ಲಾದ, ವೈ.ಪಾಪಯ್ಯ ಇತರರಿದ್ದರು.