

ಅರಸೀಕೆರೆ: ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಸರ್ಕಾರ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು, ಸಮುದಾಯ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಪರಿಶಿಷ್ಟ ಜಾತಿಯ 38 ಫಲಾನುಭವಿಗಳಿಗೆ ಕೊಳವೆಬಾವಿ ಪರಿಕರ ವಿತರಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜನರ ಸುಧಾರಣೆ ಮಾಡಲು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಒಳಗೊಂಡಂತೆ ಬೇರೆ ಬೇರೆ ಮೂಲಗಳಿಂದ ಅನುದಾನ ತಂದು ನೆರವು ನೀಡಲಾಗುತ್ತಿದೆ. ಇದೂವರೆಗೂ ಅರ್ಜಿ ಸಲ್ಲಿಕೆ ಮಾಡಿರುವ ಬಹುತೇಕ ಫಲಾನುಭವಿಗಳಿಗೆ ಸವಲತ್ತು ನೀಡಲಾಗಿದೆ. ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ನೆರವಿಗೆ ಧಾವಿಸಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಫಲಪ್ರದವಾಗಲಿವೆ ಎಂದು ತಿಳಿಸಲಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಎಇಇ ಸುಂದರ್ ರಾಜ್ ಮಾತನಾಡಿ, ಎಸ್‌ಸಿಪಿ, ಟಿಎಸ್‌ಪಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಪರಿಶಿಷ್ಟ ಜಾತಿಯ 38 ಫಲಾನುಭವಿಗಳಿಗೆ ಮೋಟರ್ ಪಂಪ್, ಪೈಪ್ ಸೇರಿದಂತೆ ಹಲವು ಪರಿಕರಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ರೈತ ಮುಖಂಡ ಹರತನಹಳ್ಳಿ ಜಯಣ್ಣ, ನಾಗರಾಜ್ ಇತರರು ಇದ್ದರು.