ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನೆರವು

BLY-17-4
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಾತನಾಡಿದರು.
Published on

ಬಳ್ಳಾರಿ : ಪುರಾಣಗಳಲ್ಲಿ ಶಿವನನ್ನು ವಿಶ್ವಕರ್ಮನೆಂದು ವರ್ಣಿಸಲಾಗುತ್ತದೆ. ವಿಶ್ವಕರ್ಮರು ಕರ್ಮಮಾರ್ಗಗಳನ್ನು ಕಂಡುಕೊಂಡವರಾಗಿದ್ದಾರೆ ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವಕರ್ಮನೆಂದರೆ ಕೇವಲ ನಾಮರೂಪಗಳಲ್ಲ. ಅದೊಂದು ಸಕರ್ಮಕ ತತ್ವ ಮತ್ತು ಕರ್ತವ್ಯಗಳನ್ನು ನಿಯಮಿಸಿದ ವಿಶ್ವಕರ್ಮರು. ಅವರ ಸಮಾಜದ ಅಭಿವೃದ್ಧಿಗೆ ಬೇಕಾದ ಸೌಲಭ್ಯಗಳನ್ನು ನಮ್ಮ ಸರ್ಕಾರದಿಂದ ಕಲ್ಪಿಸಲಾಗುವುದು ಎಂದು ಹೇಳಿದರು.

ಶಾಸಕ ನಾರಾ ಭರತ್‌ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜದವರು ತಮ್ಮ ಕೌಶಲತೆಯಿಂದ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕೌಶಲ ಮತ್ತು ಅಚ್ಚುಕಟ್ಟಿನ ಕಾಯಕದಿಂದ ಹಲವಾರು ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ವಿಶ್ವಕರ್ಮ ಸಮಾಜದವರು ಸಬಲರಾಗಬೇಕು ಎಂದು ತಿಳಿಸಿದರು.

ಪಾಲಿಕೆ ಉಪ ಮೇಯರ್ ಜಾನಕಿ ಮಾತನಾಡಿದರು. ಧಾರವಾಡ ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಅವರು ವಿಶ್ವಕರ್ಮ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್‌ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನ್ನೂರಪ್ಪ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net