

ಹನೂರು: ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಣ ವೃತ್ತಿ ತೊರೆದು ದೇಶ ಪರ್ಯಟನೆ ಮಾಡುತ್ತಿರುವ ತಮಿಳುನಾಡಿನ ಸವಾರರೊಬ್ಬರ ಸೈಕಲ್ ಕಳ್ಳರ ಪಾಲಾಗಿದ್ದರಿಂದ ಗುರುವಾರ ಪಟ್ಟಣದ ಆಟೋ ಚಾಲಕರು ಸೈಕಲ್ ನೀಡುವ ಮೂಲಕ ಪರ್ಯಟನೆಗೆ ಸಹಕಾರ ನೀಡಿದ್ದಾರೆ.
ತಮಿಳುನಾಡಿನ ನಾಮಕಲನ್ ಅನ್ಬುಚಾರ್ಲ್ ಎಂಬುವರು 2005ರಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಘಾಸಿಗೊಂಡಿದ್ದರು. ಈ ಪ್ರಕೃತಿ ವಿಕೋಪಕ್ಕೆ ಮಾನವನೇ ಪ್ರಮುಖ ಕಾರಣ ಎಂಬುದನ್ನು ಮನಗಂಡಿದ್ದರು. ಹಾಗಾಗಿ ಅವರು ಶಿಕ್ಷಣ ವೃತ್ತಿಯನ್ನು ತೊರೆದು ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂಬ ಧ್ಯೇಯವನ್ನು ಹೊಂದಿ ದೇಶ ಪರ್ಯಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರದ ಹಿಂದೆ ತಮಿಳುನಾಡಿನಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಲು ಸೈಕಲ್ ಯಾತ್ರೆಯನ್ನು ಆರಂಭಿಸಿದ್ದರು. ಆದರೆ ಫೆ. 28 ರಂದು ಹನೂರು ತಾಲೂಕಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಬರಗೂರಿನಲ್ಲಿ ತಂಗಿದ್ದ ವೇಳೆ ಸೈಕಲ್ ಕಳ್ಳರ ಪಾಲಾಗಿತ್ತು. ಇದರಿಂದ ಧೃತಿಗೆಡದ ಅನ್ಬುಚಾರ್ಲ್ ಗುರುವಾರ ಸಂಜೆ ಬಸ್ ಮೂಲಕ ಹನೂರಿಗೆ ಆಗಮಿಸಿದ್ದು, ಈ ಬಗ್ಗೆ ಆಟೋ ಚಾಲಕರಲ್ಲಿ ವಿಷಯ ಪ್ರಸ್ತಾಪಿಸಿದರು.
ಈ ಬಗ್ಗೆ ಅರಿತ ಆಟೋ ಚಾಲಕರಾದ ನಾರಾಯಣ್, ಜಡೇಸ್ವಾಮಿ, ಸಿದ್ದರಾಜು, ಕೃಷ್ಣ, ದೇಸಿಗೌಡ ಹಾಗೂ ಸಂತೋಷ್ ಅವರು ಹಳೇ ಸೈಕಲ್ ನೀಡುವುದರ ಮೂಲಕ ಪರ್ಯಟನೆಗೆ ನೆರವಾದರು.