ಎಐಸಿಸಿ ಅಧ್ಯಕ್ಷ ಖರ್ಗೆ ಮೈಬಣ್ಣ ಅವಹೇಳನ ಶೋಭೆಯಲ್ಲ

congress protest
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಎಂ.ಎಲ್.ಮೂರ್ತಿ, ಶ್ರೀನಿವಾಸ್, ಸುಮಿತ್ರಮ್ಮ ಇತರರಿದ್ದರು.
Published on

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿ ಕುರಿತ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಮುಖಂಡರ ಮೈಬಣ್ಣವನ್ನು ಅವಹೇಳನ ಮಾಡಿರುವುದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಹೇಳಿಕೆ ನೀಡಿರುವ ಆರಗ ಜ್ಞಾನೇಂದ್ರ ವಿರುದ್ಧ ಗುರುವಾರ ಕಾಂಗ್ರೆಸ್‌ನಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತ, ಕಾರ್ಮಿಕ, ರೈತರ ಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಈಶ್ವರ ಖಂಡ್ರೆ ಅರಣ್ಯ ಸಚಿವರಾದ ನಂತರ ಮಲೆನಾಡು ಭಾಗದಲ್ಲಿ ಕಸ್ತೂರಿನ ರಂಗನ್ ವರದಿಯನ್ನು ವೈಜ್ಞಾನಿಕವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಇಂಥ ಹಿರಿಯರನ್ನು ಅವಹೇಳನ ಮಾಡಿರುವುದು ಆರಗ ಜ್ಞಾನೇಂದ್ರ ಅವರ ಘನತೆಗೆ ತಕ್ಕುದಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಧಿಕಾರಿಗಳನ್ನು, ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದು ಬಿಟ್ಟರೆ ಬೇರೆ ಏನೂ ಸಾಧನೆ ಮಾಡಿಲ್ಲ ಎಂದು ಆರೋಪಿಸಿದರು.
ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಆರಗ ಜ್ಞಾನೇಂದ್ರ ಅವರಿಗೆ ಮಿುದುಳಿಗೂ ನಾಲಿಗೆಗೂ ಸಂಬಂಧವಿಲ್ಲದಂತಾಗಿದೆ. ಜ್ಞಾನೇಂದ್ರ ಅವರನ್ನು ಆಯ್ಕೆ ಮಾಡಿದ ತೀರ್ಥಹಳ್ಳಿ ಕ್ಷೇತ್ರದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಸ್ತೂರಿ ರಂಗ ವರದಿ ಹಾಗೂ ಮಲ್ಲಿಕಾರ್ಜು ಖರ್ಗೆ ಅವರ ಬಣ್ಣಕ್ಕೂ ಹೋಲಿಕೆ ಮಾಡುವ ಅಗತ್ಯ ಇರಲಿಲ್ಲ. ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರವಾಗಿ ಧ್ವನಿ ಎತ್ತಲಿಲ್ಲ. ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗಳನ್ನು ನೀಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಆರಗ ಜ್ಞಾನೇಂದ್ರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಮುಖಂಡರಾದ ಎಂ.ಎಲ್.ಮೂರ್ತಿ, ಮಹಮದ್, ಶ್ರೀನಿವಾಸ್, ಸುಮಿತ್ರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net